ಸ್ವಲ್ಪವೇ ಸಮಯ..
ಸ್ವಲ್ಪ
ನಾನು ನೀವು
ಮಣ್ಣ ಮೇಲೇ
ನಿಶ್ಯಬ್ದವಾಗುವ.
ಗೋಚರಿಸದ
ಅಲೆ
ಬಾನುಲಿ
ಕೇಳಬೇಕೆನ್ನುವ
ನೋಡಬೇಕೆನ್ನುವ -
ಬೆರಳುಗಳನ್ನು
ಗಂಟಾಗಿಸಿ ಕೂರುವ.
ಗದ್ದಲಗಳ ದೂರಗೊಳಿಸಿದ
ಸ್ವಚ್ಛ ಸಂಕೇತದಲ್ಲಿ
ಒಬ್ಬ ಅಬ್ಬು,
ಒಂದು ಪುಟಾಣಿ ಹುಡುಗಿ,
ಒಬ್ಬ ಕನಸು ಕಣ್ಣಿನ ಯುವಕ,
ನಿದ್ರೆ ಬಾರದಹಾಗೆ,
ಒಂದು ಚಿವುಟು,
ಮುಖತೊಳೆಯುವಿಕೆ,
ತೊಳೆಯುವ ನೀರಿನಲ್ಲಿ;
ಅವಸರದಲ್ಲಿ ರಿಮೋಟು
ಒತ್ತುವುದು ಬೇಡ
ಇಂದು ತಪ್ಪಿದ ಕಾರ್ಯಕ್ರಮ
ನಾಳೆ ಪ್ರಸರಾವಾಗುವುದು ಇದ್ದದ್ದೇ ಇದೆ
ಪ್ರಸಾರವಾಗುವ ಅಲೆಗಳ ನಡುವೆ;
ಕ್ಷೀಣವಾಗಿ,
ಒಬ್ಬ ಅಬ್ಬು,
ಒಂದು ಪುಟಾಣಿ ಹುಡುಗಿ,
ಒಬ್ಬ ಕನಸು ಕಣ್ಣಿನ ಯುವಕ
ಸ್ಪಲ್ಪವೇ ಹೊತ್ತು
ನಿಶ್ಯಬ್ದವಾಗುವ
ನಾನು-ನೀವು
ನಮ್ಮ ಕೈಗಳ ವಾಸನೆಯಲ್ಲಿ
ಇದೇ ಮೂವರು
ತೂರಿ ತೂರಿ ಇಟ್ಟಿರುವ
ಕಟ್ಟಿರುವ ಕಟ್ಟಡಗಳೆಷ್ಟೋ
ಅಷ್ಟೇ ಬೆಳಕುಗಳು,
ನೆರಳುಗಳು. ಕೆಳಗೆ
ಕುರ್ಚಿ, ಹಾಸಿಗೆಗಳ ಸೊಕ್ಕು ಕಾಣದ
ರಸ್ತೆಯಂಚಿನಲ್ಲಿ ಸಾಲು ಕುಳಿತ ಜೀವಗಳ
ಉಸಿರಾಟಗಳ ಲಯವೋ ಲಯ!
ಈ ತಾಳಗಳು ಏಕತಾನವಾಗದಂತೆ
ಆಗಾಗ ಬಿಸಿಲು ಶೆಖೆಗಳು ಉಸಿರು ಕಟ್ಟಿಸುತ್ತವೆ
ಪಂಚಭೂತಗಳೂ ಭೂತಸದೃಶವಾಗಿ
ಬಡಿಸುತ್ತವೆ ಎದೆಗಳನು ಡವಡವಡವ
ಓಡುತ್ತಿರುವ ಕಾರುಗಳಲ್ಲಿಯೋ
ಬೊಬ್ಬಿಡುವ ರಾಗ ತಾಳಗಳು
ಉದ್ರೇಕದಲಿ ಎದೆಗಳನು ಕುಣಿಸುತ್ತಿವೆ
ಕೆಲವೇ ಮೀಟರುಗಳಾಚೆ
ಬೋಸ್ ಬರೆಸಿದ್ದಾರೆ
"ಇದು ಕಟ್ಟಡವಲ್ಲ, ದೇಗುಲ"
ಐಡಿ ಪತ್ರಗಳ ತೋರಿ
ಬೋಸರ ಅಪ್ರತಿಮ ಉಪಕರಣಗಳೆಡೆ
ಇಣುಕಿ, ದಾಟಿ
ಅರಿಸ್ಟಾಟಲನೆಡೆ ಒಮ್ಮೆ ನಕ್ಕು
ಅವನದ್ದೇ ಭಾಷೆಯಲ್ಲಿ
ಬರೆಯ ಹೊರಟಿದ್ದೇನೆ
ನಿಜವಾದ ಸತ್ಯಗಳ
ದೇಗುಲದ ಆಚೆಗೆ,
ಕಾಲಿಡದ, ಕಣ್ಕಣ್ಣು ಬಿಡುವ
ಇವೇ ಹಲವು ಜೀವಗಳ
ತಣ್ಣನೆಯ ನಿಟ್ಟುಸಿರು!
ಇದು ಮಾರ್ಟಿನ್ ಲೂಥರ್ ಕಿಂಗ್ ೧೯೬೩ರಲ್ಲಿ ಮಾಡಿದ ಐತಿಹಾಸಿಕ ಭಾಷಣ. ಈ ಭಾಷಣಕ್ಕೆ ಐವತ್ತು ವರುಷಗಳಾಗಿವೆ. ನಿರಂತರದ ಪ್ರಸಾದ್ ಕುಂದೂರು ಅವರು ಇದೊಂದು ಭಾಷಣವಲ್ಲ, ಚೇತನ ಎನ್ನುತ್ತಿದ್ದರು.ನನಗೆ ತಿಳಿದಂತೆ ಅನುವಾದಿಸಿದ್ದೇನೆ. ತಪ್ಪುಗಳಿಗೆ ಕ್ಷಮೆ ಇರಲಿ. ಇದು ನಿಮ್ಮ ಮನಸ್ಸುಗಳನ್ನೂ ತೇವವಾಗೀಸಿತೆಂದು ನಿಮ್ಮ ಮುಂದಿಡುತ್ತಿದ್ದೇನೆ. ---
ಇಂದಿಗೆ ಸುಮಾರು
ನೂರು ವರುಷಗಳ ಹಿಂದೆ, ಯಾರ ಮಹಾನೆರಳಿನಲ್ಲಿ ನಾವೆಲ್ಲ ಸಾಂಕೇತಿಕವಾಗಿ ನಿಂತಿದ್ದೇವೆಯೋ ಅಂತಹ ಒಬ್ಬ
ಮಹಾನ್ ಅಮೆರಿಕನ್ ‘ವಿಮೋಚನಾ ಘೋಷಣೆ’ಗೆ ಸಹಿ ಹಾಕಿದರು. ಈ ಅಪೂರ್ವವಾದ ಶಾಸನವು ಅನ್ಯಾಯದಬೆಂಕಿಯಲ್ಲಿ ಉರಿಯುತ್ತಿದ್ದ ಎಷ್ಟೋ ನೀಗ್ರೋಗಳಿಗೆ ದಾರಿದೀಪವಾಯಿತು.
ಅವರ ಬಂಧನದ ದೀರ್ಘ ರಾತ್ರಿಯನ್ನು ಕೊನೆಯಾಗಿಸುವ ಉಲ್ಲಸಿತ ಬೆಳಗಾಯಿತು.
ಆದರೆ ಒಂದು ನೂರು
ವರುಷಗಳ ನಂತರ ಇಂದಿಗೂ ನೀಗ್ರೋ ಸ್ವತಂತ್ರನಲ್ಲ. ಒಂದು ನೂರು ವರುಷಗಳ ನಂತರ, ಇಂದಿಗೂ ನೀಗ್ರೋ ಬೇರ್ಪಡಿಸುವಿಕೆಯ,
ತಾರತಮ್ಯದ ಸರಪಣಿಗಳಿಂದ ದುರ್ಬಲಗೊಳ್ಳುತ್ತಿದ್ದಾನೆ. ಒಂದು ನೂರು ವರುಷಗಳ ನಂತರವೂ, ನೀಗ್ರೋ ಲೌಕಿಕ
ಸಮೃದ್ಧಿಯ ಸಾಗರದ ನಡುವೆ, ಬಡತನದ ಪುಟ್ಟ ದ್ವೀಪದಲ್ಲಿ ಬದುಕತ್ತಲೇ ಇದ್ದಾನೆ. ಒಂದು ನೂರು ವರುಷಗಳ
ನಂತರ, ಇಂದಿಗೂ ನೀಗ್ರೋ ಅಮೆರಿಕಾದ ಸಮಾಜದ ಮೂಲೆಗಳಲ್ಲಿ ನಿತ್ರಾಣನಾಗಿ ನಿಂತಿದ್ದಾನೆ ಹಾಗೂ ತನ್ನದೇ
ನೆಲದಲ್ಲಿ ಗಡೀಪಾರಾದವರಂತಾಗಿದ್ದಾನೆ. ಅದಕ್ಕಾಗಿಯೇ ನಾವಿಂದು ಈ ಶೋಚನೀಯ ಪರಿಸ್ಥಿತಿಯನ್ನು ನಾಟಕೀಯವಾಗಿಸಲು
ಇಲ್ಲಿ ನೆರೆದಿದ್ದೇವೆ.
ಒಂದು ರೀತಿಯಲ್ಲಿ
ನಾವಿಂದು ನಮ್ಮ ದೇಶದ ರಾಜಧಾನಿಗೆ ಒಂದು ಚೆಕ್ ಅನ್ನು ನಗದಾಗಿಸಲು ಬಂದಿದ್ದೇವೆ. ಈ ದೇಶದ ಶಿಲ್ಪಿಗಳುನಮ್ಮ ಸಂವಿಧಾನದ ಹಾಗೂ ‘ಡಿಕ್ಲೆರೇಷನ್ ಆಫ್ ಇಂಡಿಪೆಂಡೆನ್ಸ್’
ನ ಅದ್ಭುತ ಸಾಲುಗಳನ್ನು ಬರೆದಾಗ ಪ್ರತಿಯೊಬ್ಬ ಅಮೆರಿಕನ್ನನಿಗೂ ಸಲ್ಲುವಂತಹ ಒಂದು ವಾಗ್ದಾನದ ಪತ್ರಕ್ಕೆ
ಸಹಿ ಹಾಕಿದರು. ಈ ಪತ್ರ ಪ್ರತಿಯೊಬ್ಬ ಮನುಷ್ಯನಿಗೂ, ಹೌದು, ಕರಿಯ ಹಾಗೂ ಬಿಳಿಯ ಮನುಷ್ಯರಿಬ್ಬರಿಗೂ,
ಜೀವನದ “ನಿರಾಕರಿಸಲಾಗದ ಹಕ್ಕುಗಳಾದ – ಜೀವಿಸುವ ಹಕ್ಕು, ಸ್ವಾತಂತ್ರ್ಯದ ಹಕ್ಕು ಮತ್ತು ಸಂತಸದೆಡೆಗೆ
ನಡೆಯುವ ಅವಕಾಶ” ಕೊಡುವ ಮಾತು ಕೊಟ್ಟಿತ್ತು, ದೇಶದ ಬಣ್ಣವುಳ್ಳ ಜನಾಂಗವನ್ನು ಗಮನಿಸಿದರೆ, ಈ ವಾಗ್ದಾನವನ್ನು
ಅಮೆರಿಕಾ ಕಾಯ್ದುಕೊಳ್ಳಲಿಲ್ಲವೆಂಬುದು ಸ್ಪಷ್ಟವಾಗಿದೆ. ಈ ಪವಿತ್ರ ಕಟ್ಟುಪಾಡಿಗೆ ಒಳಗೊಳ್ಳುವ ಬದಲಾಗಿ
ಅಮೆರಿಕಾ ನೀಗ್ರೋ ಜನಕ್ಕೆ ಕೆಟ್ಟ ಚೆಕ್ ಒಂದನ್ನು ನೀಡಿದೆ, “ಸಾಕಷ್ಟು ಮೊತ್ತವಿಲ್ಲ” ಎಂದು ಮರಳಿಬರುವಂತಹ
ಚೆಕ್ಕಿದು.
ಆದರೆ ನ್ಯಾಯದ ಬ್ಯಾಂಕ್
ದಿವಾಳಿಯೆದ್ದಿದೆ ಎಂದು ನಂಬಲು ನಾವು ಸಿದ್ಧರಿಲ್ಲ. ಈ ದೇಶದಲ್ಲಿನ ಅವಕಾಶಗಳ ಅದಮ್ಯ ಖಜಾನೆಯಲ್ಲಿ
“ಸಾಕಷ್ಟು ಮೊತ್ತವಿಲ್ಲ” ಎಂದು ನಂಬಲು ನಾವು ಸಿದ್ಧರಿಲ್ಲ. ಹಾಗೂ ಇದಕ್ಕಾಗಿಯೇ ನಾವಿಂದು ಈ ಚೆಕ್
ಅನ್ನು ನಗದಾಗಿಸಲು ಬಂದಿದ್ದೇವೆ. ನಮ್ಮ ಬೇಡಿಕೆಗಳಿಗೆ ಪ್ರತಿಯಾಗಿ ಸ್ವಾತಂತ್ರ್ಯದ ಸಂಪತ್ತನ್ನು ಮತ್ತು
ನ್ಯಾಯದ ರಕ್ಷಣೆಯನ್ನು ನೀಡುವ ಚೆಕ್ ಅನ್ನು ನಗದಾಗಿಸಲು ಬಂದಿದ್ದೇವೆ.
ಇಂದಿನ ಅದಮ್ಯ ತುರ್ತನ್ನು
ನೆನಪಿಸಲೆಂದೇ ನಾವಿಂದು ಈ ಪವಿತ್ರ ಸ್ಥಳದಲ್ಲಿ ನೆರೆದಿದ್ದೇವೆ. ತಣಿಯುವ ಅಥವಾ “ಕ್ರಮೇಣವಾಗಿ” ಎಂಬ
ಔಷಧಿಗಳಿಂದ ಸಮಾಧಾನಗೊಳ್ಳುವ ಕಾಲ ಇದಲ್ಲ. ಪ್ರಜಾಪ್ರಭುತ್ವದ ವಾಗ್ದಾನಗಳನ್ನು ನಿಜವಾಗಿಸಲು ಇಂದೇ
ಸರಿಯಾದ ಕಾಲ. ಬೇರ್ಪಡಿಸುವಿಕೆಯ ಕರಾಳ ಕಂದಕಗಳಿಂದ ಎದ್ದು ಜನಾಂಗೀಯ ನ್ಯಾಯದ ಹೆದ್ದಾರಿಯಲ್ಲಿ ನಡೆಯಲು
ಇಂದೇ ಸರಿಯಾದ ಕಾಲ. ಜನಾಂಗೀಯ ಭೇದದ ಹೂಳಿನಿಂದ ದೇಶವನ್ನು ಮೇಲೆತ್ತಿ ಭ್ರಾತೃತ್ವದ ಭದ್ರ ಬುನಾದಿಯ
ಮೇಲೆ ದೇಶವನ್ನಿರಿಸಲು ಇಂದೇ ಸರಿಯಾದ ಕಾಲ. ಭಗವಂತನ ಎಲ್ಲ ಮಕ್ಕಳಿಗೂ ನ್ಯಾಯವನ್ನು ನಿಜವಾಗಿಸಲು ಇಂದೇ
ಸರಿಯಾದ ಕಾಲ.
ಇವತ್ತಿನ ತುರ್ತನ್ನು
ಗಮನಿಸದೇ ಹೋದರೆ ಇದು ದೇಶಕ್ಕೆ ಮುಳುವಾದೀತು. ಧಗಧಗಿಸುವ ಬೇಗೆಯ ನೀಗ್ರೋಗಳ ಬೇಸಿಗೆ ಸ್ವಾತಂತ್ರ್ಯ
ಮತ್ತು ಸಮಾನತೆಯ ಉಲ್ಲಸಿತ ಶರದ್ ಋತುವಿನಿಂದಷ್ಟೇ ಮಾಯವಾದೀತು. ೧೯೬೩ ಕೊನೆಯಲ್ಲ, ಬದಲಾಗಿ ಪ್ರಾರಂಭ.
ಹಬೆಯನ್ನೂದುತ್ತಿದ್ದ ನೀಗ್ರೋಗಳು ಇಂದು ಅದರ ಹೊರತಾಗಿದ್ದು ಸಂತೋಷಪಡಬೇಕೆಂದು ಭಾವಿಸುವವರು, ದೇಶ
ಹೀಗೆಯೇ ಮುಂದುವರೆದರೆ, ಬಡಿದೆಬ್ಬಿಸಲ್ಪಡುತ್ತಾರೆ. ನೀಗ್ರೋಗಳಿಗೆ ಜನ್ಮದತ್ತ ಹಕ್ಕುಗಳು ನೀಡುವವರೆಗೆ,ಅಮೆರಿಕಾದಲ್ಲಿ ಶಾಂತಿಯಾಗಲೀ, ನೆಮ್ಮದಿಯಾಗಲೀ ನೆಲೆನಿಲ್ಲದು.
ಕ್ರಾಂತಿಯ ಚಂಡಮಾರುತವು ನ್ಯಾಯದ ಬೆಳಕು ಮೂಡುವವರೆಗೆ ದೇಶದ ಬುನಾದಿಯನ್ನು ಅಲ್ಲಾಡಿಸುತ್ತಲೇ ಇರುವುದು.
ಇನ್ನು ನ್ಯಾಯದತ್ತ
ಮುಟ್ಟಿಸುವ ಹೊಸ್ತಿಲ ಮೇಲೆ ನಿಂತಿರುವ ನನ್ನ ಜನರ ಬಳಿ ನಾನು ಹೇಳುವುದೊಂದಿದೆ: ನಮ್ಮ ನ್ಯಾಯಯುತವಾದ ಸ್ಥಾನವನ್ನು ಪಡೆಯುವ ಈ ಪ್ರಕ್ರಿಯೆಯಲ್ಲಿ
ನಾವು ಕೆಡುಕನ್ನೆಸಗಿ ತಪ್ಪಿತಸ್ಥರಾಗಬಾರದು. ಕಹಿ ಮತ್ತು ದ್ವೇಷವನ್ನು ಕುಡಿದು ನಮ್ಮ ಸ್ವಾತಂತ್ರ್ಯದ
ದಾಹವನ್ನು ತಣಿಸಲೆತ್ನಿಸದಿರೋಣ. ನಮ್ಮ ಹೋರಾಟವನ್ನು ಶಿಸ್ತಿನ ಹಾಗೂ ಘನತೆಯ ಎತ್ತರದಲ್ಲಿರಿಸೋಣ. ನಮ್ಮ
ಸೃಜನಾತ್ಮಕ ಹೋರಾಟವನ್ನು ಭೌತಿಕ ಹಿಂಸೆಯ ಮಟ್ಟಕ್ಕಿಳಿಯಲು ನಾವು ಬಿಡಬಾರದು. ಭೌತಿಕ ಶಕ್ತಿಯು ಆತ್ಮದ
ಶಕ್ತಿಯೊಡನೆ ಬೆರೆಯುವ ಮಹಾ ಎತ್ತರಗಳಿಗೆ ನಾವೀಗ ಏರಬೇಕು.
ನೀಗ್ರೋ ಜನಾಂಗವನ್ನು
ಸುತ್ತುವರೆದಿರುವಂತಹ ಈ ತೀವ್ರಗಾಮೀ ಪ್ರವೃತ್ತಿಯಿಂದ ಎಲ್ಲ ಬಿಳಿಯರೊಡನೆಯೂ ನಮ್ಮ ನಂಬಿಕೆ ಕಳೆದುಹೋದಂತಾಗಬಾರದು.
ಏಕೆಂದರೆ, ಇಂದು ಇಲ್ಲಿ ಅವರು ಸೇರಿರುವುದರಿಂದಲೇ ಗೋಚರವಾಗುವಂತೆ, ನಮ್ಮ ಹಲವಾರು ಬಿಳಿಯ ಗೆಳೆಯರಿಗೆ
ಅವರ ಹಾಗೂ ನಮ್ಮ ಗುರಿಗಳು ಪರಸ್ಪರ ಹೆಣೆದುಕೊಂಡಿರುವುದರ ಅರಿವಾಗಿದೆ. ಹಾಗೂ ಅವರಿಗೆ ಅವರ ಸ್ವಾತಂತ್ರ್ಯ
ನಮ್ಮ ಸ್ವಾತಂತ್ರ್ಯದೊಡನೆ ಸೂಕ್ಷ್ಮವಾಗಿ ತಳುಕು ಹಾಕಿಕೊಂಡಿರುವುದರ ಅರಿವಾಗಿದೆ.
ನಾವು ಒಬ್ಬರೇ ನಡೆಯಲಾರೆವು.
ಹಾಗೂ ನಾವು ನಡೆದಂತೆಲ್ಲಾ,
ನಾವೂ ಎಂದಿಗೂ ಮುಂದೆ ಮುಂದೆ ಸಾಗುತ್ತೇವೆ ಎಂಬ ಪ್ರತಿಜ್ಞೆಯನ್ನು ಕೈಗೊಳ್ಳಬೇಕಾಗಿದೆ.
ನಾವು ಹಿಂದೆ ತಿರುಗಲಾರೆವು.
ನಾಗರೀಕ ಹಕ್ಕುಗಳಿಗಾಗಿ
ನಿರತವಾಗಿರುವವರನ್ನು ಕೆಲವರು ಕೇಳುತ್ತಾರೆ – “ನಿಮಗೆಂದು ತೃಪ್ತಿ?” ಬಣ್ಣಿಸಲೂ ಆಗದ ಹೀನ ಪೋಲೀಸ್
ಕ್ರೌರ್ಯಕ್ಕೆ ನೀಗ್ರೋ ಬಲಿಯಾಗುತ್ತಿರುವವರೆಗೆ ನಾವೆಂದೂ ತೃಪ್ತಿಯನ್ನು ಕಾಣೆವು. ಪ್ರಯಾಣದ ದಣಿವಿನಲ್ಲಿ
ಭಾರವಾದ ನಮ ದೇಹಗಳಿಗೆ ಹೈವೇಯ ಮೋಟೆಲ್ ಗಳಲ್ಲಿ, ನಗರದ ಹೋಟೆಲ್ ಗಳಲ್ಲಿ ವಸತಿ ದೊರೆಯುವವರೆಗೆ ನಾವು
ತೃಪ್ತಿಯನ್ನು ಕಾಣೆವು.ನೀಗ್ರೋವೊಬ್ಬನ ಚಲನೆ ಒಂದು
ಸಣ್ಣ ಕೇರಿಯಿಂದ ದೊಡ್ಡ ಕೇರಿಗೆ ಆದದ್ದಕ್ಕಷ್ಟೇ ನಾವು ತೃಪ್ತಿಪಡಲಾರೆವು. ನಮ್ಮ ಮಕ್ಕಳ ಅಸ್ತಿತ್ವವನ್ನೇ
ಇಲ್ಲವಾಗಿಸುವಂತಹ, ಅವರ ಘನತೆಯನ್ನೇ ಕಿತ್ತೊಗೆಯುವಂತಹ “ಬಿಳಿಯರಿಗೆ ಮಾತ್ರ” ಅನ್ನುವ ನಾಮಫಲಕಗಳು
ಕಾಣಿಸುತ್ತಿರುವ ತನಕ ನಮಗೆ ತೃಪ್ತಿಯಿರದು. ಮಿಸಿಸಿಪಿಯ ನೀಗ್ರೋ ಮತ ಚಲಾಯಿಸಲಾಗದಂತಹ ಹಾಗೂ ನ್ಯೂಯಾರ್ಕಿನ
ನೀಗ್ರೋಗೆ ಮತ ಚಲಾಯಿಸಲು ಏನೂ ಕಾರಣವಿಲ್ಲದಂತಹ ಸ್ಥಿತಿಯಿರುವವರೆಗೆ ನಮಗೆ ತೃಪ್ತಿಯಿರದು. “ನ್ಯಾಯ
ನೀರಿನಂತೆ, ಧರ್ಮಶೀಲತೆ ಪ್ರಬಲ ತೊರೆಯಂತೆ ಹರಿಯುವ ತನಕ” ನಮಗೆ ನೆಮ್ಮದಿಯಿರದು.
ನಾನು ನಿಮಗಿಂದು
ಹೇಳುತ್ತಿದ್ದೇನೆ – ಗೆಳೆಯರೇ, ನಿರಾಶೆಯ ಕಂದಕದೊಳಗೆ ತೇಲಾಡುವುದು ಬೇಡ.
ನನಗೆ ಈಗಲೂ ಒಂದು
ಕನಸಿದೆ. ಈ ಕನಸು ಅಮೆರಿಕನ್ ಕನಸಿನಲ್ಲೇ ಆಳವಾಗಿ ಬೇರುಬಿಟ್ಟಿದೆ.
ನನಗೊಂದು ಕನಸಿದೆ.
ಈ ದೇಶ ಒಮ್ಮೆ ಎದ್ದೇಳುತ್ತದೆ ಹಾಗೂ ಇಲ್ಲಿಯ ಧರ್ಮದ ಅರ್ಥವನ್ನು ನಿಜವಾಗಲೂ ಬದುಕಿ ತೋರಿಸುತ್ತದೆ
“ನಾವು ಈ ಸತ್ಯಗಳು ಸ್ವಯಂಗೋಚರವೆಂದು ಭಾವಿಸುತ್ತೇವೆ – ಪ್ರತಿಯೊಬ್ಬ ಮನುಷ್ಯನೂ ಸಮಾನವಾಗಿ ಸೃಷ್ಟಿಸಲ್ಪಟ್ಟಿದ್ದಾನೆ.”
ನನಗೊಂದು ಕನಸಿದೆ.
ಒಂದು ದಿನ ಜಾರ್ಜಿಯಾದ ಕೆಂಪು ಬೆಟ್ಟಗಳ ಮೇಲೆ ಗುಲಾಮನಾಗಿದ್ದವನ ಮಗನೊಬ್ಬ ಹಾಗೂ ಗುಲಾಮನ ಒಡೆಯನಾಗಿದ್ದವನ
ಮಗನೊಬ್ಬ ಒಟ್ಟಿಗೆ ಭ್ರಾತೃತ್ವದ ಮೇಜಿನಲ್ಲಿ ಸಮಾನವಾಗಿ ಕೂರಬಲ್ಲರೆಂದು.
ನನಗೊಂದು ಕನಸಿದೆ.
ಮಿಸಿಸಿಪಿಯಂತಹ ಅನ್ಯಾಯದ ಬೇಗೆಯಲ್ಲಿ ಬೇಯುವ ರಾಜ್ಯವು ಕೂಡಾ ಸ್ವಾತಂತ್ರ್ಯ ಮತ್ತು ನ್ಯಾಯದ ಓಯಸಿಸ್
ಆಗುತ್ತದೆಂದು.
ನನಗೊಂದು ಕನಸಿದೆ.
ನನ್ನ ನಾಲ್ಕು ಪುಟ್ಟ ಮಕ್ಕಳು ಅವರ ಚರ್ಮದ ಬಣ್ಣದಿಂದ ಅಳೆಯಲ್ಪಡದೇ ಅವರ ವ್ಯಕ್ತಿತ್ವದ ಸತ್ವದಿಂದ
ಅಳೆಯುವ ದೇಶದಲ್ಲಿ ಬದುಕುತ್ತಾರೆಂದು.
ನನಗೊಂದು ಕನಸಿದೆ.
ಒಂದು ದಿನ. ಪುಟ್ಟ ಕರಿಯ ಹುಡುಗರು ಮತ್ತು ಹುಡುಗಿಯರು, ಪುಟ್ಟ ಬಿಳಿಯ ಹುಡುಗರು ಮತ್ತು ಹುಡುಗಿಯರೊಂದಿಗೆ
ಅಣ್ಣ ತಮ್ಮಂದಿರಂತೆ ಕೈ ಕೈ ಹಿಡಿದು ನಡೆಯಬಲ್ಲವರಾಗುತ್ತಾರೆಂದು.
ಇಂದು ನನಗೊಂದು ಕನಸಿದೆ.
ಒಂದು ದಿನ ಎಲ್ಲ
ಕಂದಕಗಳೂ ಮೇಲೇರುತ್ತವೆ ಹಾಗೂ ಎಲ್ಲ ಪರ್ವತಗಳೂ ತಗ್ಗಾಗುತ್ತವೆ, ಒರಟು ಜಾಗಗಳನ್ನು ಸಮತಟ್ಟಾಗಿಸಲಾಗುತ್ತದೆ
ಹಾಗೂ ವಕ್ರವಾದ ಪ್ರದೇಶಗಳನ್ನು ನೇರವಾಗಿಸಲಾಗುತ್ತದೆ: “ಹಾಗೂ ಭಗವಂತನ ಮಹಿಮೆ ಗೋಚರವಾಗುತ್ತದೆ ಮತ್ತು
ಪ್ರತಿಯೊಂದು ಜೀವವೂ ಅದನ್ನು ಒಟ್ಟಾಗಿ ನೋಡೂತ್ತದೆ”
ಈ ನಂಬಿಕೆಯಿಂದ,
ನಾವು ನಿರಾಶೆಯ ಶಿಖರಗಳಿಂದ ಭರವಸೆಯ ಕಲ್ಲುಗಳನ್ನು ಬೇರ್ಪಡಿಸಲು ಸಾಧ್ಯ. ಈ ನಂಬಿಕೆಯಿಂದ ನಾವು ಒಟ್ಟಿಗೆ
ಕೆಲಸ ಮಾಡಬಲ್ಲೆವು, ಒಟ್ಟಿಗೆ ಪ್ರಾರ್ಥಿಸಬಲ್ಲೆವು, ಒಟ್ಟಿಗೆ ಹೋರಾಡಬಲ್ಲೆವು, ಒಟ್ಟಿಗೆ ಜೈಲು ಸೇರಬಲ್ಲೆವು,
ಸ್ವಾತಂತ್ರ್ಯಕ್ಕಾಗಿ ಒಟ್ಟಿಗೆ ಎದ್ದು ನಿಲ್ಲಬಲ್ಲೆವು – ನಾವು ಒಂದು ದಿನ ಸ್ವತಂತ್ರರಾಗೇ ಆಗುತ್ತೇವೆಂಬ
ನಂಬಿಕೆಯಿಂದ. ಇದನ್ನೂ ನೋಡಿ: ಆಂಗ್ಲ ಪ್ರತಿಯ ಲಿಂಕು: http://www.americanrhetoric.com/speeches/mlkihaveadream.htm
ಇನ್ನೊಂದು ಅನುವಾದ: http://sampada.net/article/6024
ಎಷ್ಟೋ ದಿನಗಳಂತೆ ಭಾಸವಾದ
ಮುವ್ವತ್ತು ಗಂಟೆಗಳನ್ನೂ ದಾಟಿ
ರೈಲು ಚಲಿಸುತ್ತಲೇ ಇದೆ
ಮುವ್ವತ್ತು ಗಂಟೆಗಳಲ್ಲಿ ಮುವ್ವತ್ತು ಕಡೆ
ನಿಂತು, ಟಿಕೆಟಿದ್ದವರ, ಇಲ್ಲದವರ,
ಕಾಯ್ದಿರಿಸಿದ ಪಟ್ಟಿಯಲ್ಲಿ ಕಳೆದುಹೋಗಿ
ಅಲವತ್ತವರೆನ್ನಲ್ಲ
ಕರೆದೊಯ್ಯುವ ಟ್ರೈನು
ಆಧುನಿಕ ಚಿಂತನೆಗಳನ್ನು ಅರಗಿಸಿಕೊಂಡಿರಲೇ ಬೇಕು!
ಹುಟ್ಟನ್ನೂ, ಧಿರಿಸನ್ನೂ ನೋಡದೆ
ಪರಿಚಯಕ್ಕೆ ಮಾತ್ರ ಹೆಸರು ಕೇಳುತ್ತದೆ
ಒಮ್ಮೆಮ್ಮೆ ವಯಸ್ಸು ಹೇಳಿದರೆ ಕನಿಕರ ತೋರುತ್ತದೆ
ನಿಮ್ಮ ಹಮ್ಮುಗಳ ಬಿಮ್ಮುಗಳ ಪ್ರದರ್ಶನಕ್ಕೊಮ್ಮೆಮ್ಮೆ
ಜಾಗ ಬಿಟ್ಟು, ನಿಟ್ಟುಸಿರಿಟ್ಟು
ಮತ್ತೆ ಹೊಟ್ಟೆಯೊಳಗೆಳೆದುಕೊಳ್ಳುತ್ತದೆ
ತಾಯಿಯಾದರೂ ಹೊಟ್ಟೆಯೊಳಗಿರುವ
ಒಂದು ಮಗುವಿಗೆ ಹೆಚ್ಚು ಸಂತೋಷ ಪಟ್ಟಾಳು
ಟ್ರೈನು ಸದಾ ಸಮಾನ!
-----------------------
ಒಳ ಬರುವ ಮುಖಗಳಲ್ಲೆಷ್ಟು ಕಥೆಗಳು!
ಪ್ರತಿ ಮುಖದಲ್ಲೂ ಬೇರೆ ಬೇರೆಯ ಗೆರೆಗಳು
ಒಳಗೆ ಕೂತು ಕಣ್ಣುಗಳನ್ನುಬ್ಬಿಸಿಕೊಂಡೇ ನೋಡುತ್ತೇನೆ
ಪ್ಯಾಂಟುಗಳು ಪಂಚೆಗಳನ್ನು ನೆನಪಿಸಿಕೊಳ್ಳುವುದನ್ನು,
ಸೀರೆ ಸಲ್ವಾರ್‍ಗಳು ನಗುವುದನ್ನು,
ಭಾಷೆಗಳು ಭಾಷೆಗಳಾಚೆ ಬೆಳೆಯುವುದನ್ನು,
ಚಾ ಕುಡಿಯಲು ನೋಟು ತೆಗೆದರೆ
ಗಾಂಧಿ ತಾತ ಹೆಚ್ಚು ನಗುತ್ತಿದ್ದಾನೆ!
ಎದೆಗೆ ಬಿದ್ದ ಅಕ್ಷರಗಳು
ತೇವವಾಗುತ್ತವೆ ಟ್ರೈನಿನಲ್ಲಿ.
ಯಾರೋ ಯಾರಿಗೋ ತಾಯಿಯಾಗುತ್ತಾರೆ,
ತಂಗಿ, ತಮ್ಮ, ಅಣ್ಣ, ಗೆಳೆಯರಾಗುತ್ತಾರೆ
ಚುನಾವಾಣೆಯಿಲ್ಲದೆಯೂ ಜನ
"ಭಾಯಿ ಭಾಯಿ" ಎನ್ನುತ್ತಾರೆ
ಸ್ಲೀಪರ್ ಬೋಗಿಯ ಸ್ವಿಚ್ ಬೋರ್ಡಿಗೆ
ಶಪಿಸಿ ಮೊಬೈಲ್ ಮರೆಯುತ್ತಾರೆ
ಪಕ್ಕದ ಸ್ಲಮ್ಮುಗಳ ಕಸದ ರಾಶಿಯನ್ನು ನೋಡಿ
ಎಸೆಯ ಹೊರಟ ಕೆಲವು
ಕೈಗಳಾದರೂ ಹಿಂದಿರುಗುತ್ತವೆ
-------------------
ಇಷ್ಟರ ಮಧ್ಯ ಸೋಲಪುರದಲ್ಯಾರೋ ಗಡ್ಡದಾರಿ
ಹತ್ತಿ ಬೈಯತೊಡಗುತ್ತಾನೆ
ನಮ್ಮ ಹೆಂಗಸರತ್ತ ಸುಳಿಯಬೇಡಿರೆಂದು
ಸೀಟುಗಳತ್ತ ಅಟ್ಟುತ್ತಾನೆ
ಹೆಂಗಸರ ಜೊತೆಗೆ ಇನ್ನಷ್ಟು
ಗಡ್ಡಧಾರೀ ಗಂಡಸರೂ ಬಂದು
ಆರು ಸೀಟುಗಳಿಗೆ ಕಿಟಕಿಯಿಲ್ಲದಂತೆ
ಮುಖವಿಲ್ಲದಂತೆ ಪರದೆ ಕಟ್ಟುತ್ತಾರೆ
ಅವರದ್ದೇ ಧರ್ಮದ
ಸಹೃದಯಿಗಳು "ಯಾರೋ ಪುಣ್ಯವಂತರು" ಎನ್ನುತ್ತಾರೆ
ಪೇಟ ಧಾರಿಯೊಬ್ಬ ಮುಖ ಸಿಂಡರಿಸುತ್ತಾನೆ
ಮತ್ತೊಬ್ಬನ್ಯಾರೋ ಪಕ್ಕದವನ ಕಿವಿಯಲ್ಲಿ
ಗುಸುಗುಟ್ಟುತ್ತಾನೆ
ನಾಸ್ತಿಕನೊಬ್ಬ ಇವರನ್ನೆಲ್ಲ ನೋಡಿ
"ಧರ್ಮಗಳೇ ಇಷ್ಟು!" ಎನ್ನುತ್ತಾನೆ
ಇತ್ತ ಎ.ಸಿ. ಕೋಚುಗಳಲ್ಲಿ
ಇವ್ಯಾವುದರ ಪರಿವೆ ಇಲ್ಲದೇ
ಭಾರತದ ಇನ್ನೊಂದೇ ವರ್ಗದ ಜನತೆ
ಸದಾ ಪರದೆ ಹಾಕಿಕೊಂಡು ನಿದ್ದೆ ಮಾಡುತ್ತಿದೆ!
ಈ ಭಿನ್ನತೆಯ ಅಸಹನೀಯ ಉಸುರುಗಳ ತಾಳಲಾರದೇ
ಟ್ರೈನು ವೇಗ ವರ್ಧಿಸುತ್ತದೆ
ಆಸ್ತಿಕ, ನಾಸ್ತಿಕ, ಇತರೆಗಳನ್ನೆಲ್ಲ
ದಿಲ್ಲಿಯಲ್ಲಿ ಉಗುಳಿ ಹೊರಗಟ್ಟಿ ನಿಟ್ಟುಸಿರಿಡುತ್ತದೆ
ಏಕಾಂತದಲ್ಲೊಮ್ಮೆ ವಿರಮಿಸಿ
ಗಾಂಧೀ ತಾತನೊಡನೆ ಕನಸು ಕಾಣುತ್ತದೆ
ಮತ್ತೆ ಇನ್ಯಾವುದೋ ಜೀವಗಳ ಹೊತ್ತು,
ಮರಳಿ ಸಾಗುತ್ತದೆ
೨೦೧೨ರ ಭೌತಶಾಸ್ತ್ರದ ನೊಬೆಲ್ ಸೆರ್ಜ್
ಹಾರೋಚೆ ಮತ್ತು ಡೇವಿಡ್ ವೈನ್ ಲ್ಯಾಂಡ್ ಅವರಿಗೆ ನೀಡುತ್ತಿದ್ದಂತೆಯೇ ಕ್ವಾಂಟಮ್ ಭೌತಶಾಸ್ತ್ರ ಮತ್ತೆ
ಸುದ್ದಿಯಾಗಿದೆ. ಕ್ವಾಂಟಮ್ ಭೌತಶಾಸ್ತ್ರಕ್ಕೆ ಸರಿ ಸುಮಾರು ನೂರು ವರ್ಷಗಳಾಗುತ್ತಿರುವಾಗ ಕ್ವಾಂಟಮ್
ತತ್ವದಂತೆಯೇ ವರ್ತಿಸುವ ಕ್ವಾಂಟಮ್ ಗಣಕಯಂತ್ರಗಳನ್ನು ನಿರ್ಮಿಸಬಹುದೆಂಬ ವಿಚಾರಕ್ಕೆ ಮನ್ನಣೆ ಸಿಗುತ್ತಿದೆ.
ಸುತ್ತಲಿನ ಜಗತ್ತಿನಲ್ಲಿ ನಾವು ನಿತ್ಯ ನ್ಯೂಟನ್ನಿಗೆ ವಿಧೇಯವಾಗಿರುವ ಭೌತಶಾಸ್ತ್ರವನ್ನು ನೋಡುತ್ತೇವೆ.
ಬೆಳಕಿನ ವೇಗಕ್ಕಿಂತ ಅತಿ ಕಡಿಮೆಯ ವೇಗದಲ್ಲಿ ಚಲಿಸುತ್ತಿರುವ ವಸ್ತುಗಳನ್ನು, ಪರಮಾಣುಗಳಿಗಿಂತ ಬಹು
ದೊಡ್ಡ ಗಾತ್ರದ ವಸ್ತುಗಳನ್ನು ನೋಡುವ ನಮಗೆಲ್ಲರಿಗೂ ನ್ಯೂಟನ್ನಿನ ಭೌತಶಾಸ್ತ್ರದ ತಿಳಿವಿರದಿದ್ದರೂ,
ಅದರ ವಿಚಾರಗಳನ್ನು ಗ್ರಹಿಸುವದು ಕಷ್ಟವಲ್ಲ.ಆದರೆ ಕ್ವಾಂಟಮ್ ವಿಜ್ಞಾನದಲ್ಲಿ ಕಣವೊಂದು ಏಕ ಕಾಲದಲ್ಲಿ
ಎರಡು ಸ್ಥಳಗಳಲ್ಲರಬಹುದು, ಇಲ್ಲಿರುವ ಒಂದು ಕಣ ಇನ್ನೆಲ್ಲೋ ಇರುವ ಒಂದು ಕಣದ ಸ್ಥಿತಿಯೊಂದಿಗೆ ಸಿಕ್ಕಿನಲ್ಲಿರಬಹುದು(ಎಂಟಾಗಲ್ಮೆಂಟ್)
ಎಂದು ನಾವು ಆಗಾಗ ಕೇಳುತ್ತಿರುತ್ತೇವೆ. ಇವುಗಳ ಅರ್ಥವೇನು ಎಂದು ಬೆರಗಾಗುತ್ತಿರುತ್ತೇವೆ. ಹೆಚ್ಚು
ಹೆಚ್ಚು ಗಣಿತದಲ್ಲಿ ವ್ಯಕ್ತಗೊಳ್ಳುವ ಭೌತಶಾಸ್ತ್ರವನ್ನು ಕನ್ನಡದಲ್ಲೋ, ಇಂಗ್ಲಿಷಿನಲ್ಲೋ ವ್ಯಕ್ತಪಡಿಸಲು
ಹೋದಾಗ ಈ ರೀತಿ ಗೊಂದಲಗಳಾಗುವುದುಂಟು.
ನೀವು ಒಂದು ನಾಣ್ಯವನ್ನು ಟಾಸ್ ಹಾಕಿ
ಅದನ್ನು ನಿಮ್ಮ ಕೈಯಲ್ಲಿ ಮುಚ್ಚಿಟ್ಟುಕೊಳ್ಳಿ. ನೀವು ಅದನ್ನು ಮುಚ್ಚಿಟ್ಟುಕೊಂಡಷ್ಟು ಹೊತ್ತೂ ನನಗೆ
ಅದು ಯಾವ ಮುಖವಾಗಿ ಬಿದ್ದಿದೆ ಎಂಬುದು ಗೊತ್ತಿರುವುದಿಲ್ಲ. ಆದರೆನ್ಯೂಟನ್ನನಪ್ರಕಾರ “ಆ ನಾಣ್ಯದ ಸ್ಥಿತಿ ಹೆಡ್ ಅಥವಾ ಟೇಲ್ ಆಗಿ ನಿರ್ಧರಿಸಲ್ಪಟ್ಟಿದ್ದು ಆ ನಾಣ್ಯದ ಸ್ಥಿತಿ
ನನಗೆ ತಿಳಿದಿಲ್ಲ ಅಷ್ಟೇ”. ನಮ್ಮ
ಯೋಚನೆಗಳೂ ಕೂಡಾ ಹೀಗೆಯೇ ಸಾಗುತ್ತವೆ. ಅಲ್ಲವೇ? ಚಂದ್ರನನ್ನು ನಾವು ಇವತ್ತು ನೋಡಿರದಿದ್ದರೂ ಚಂದಿರ
ಆಕಾಶದಲ್ಲೆಲ್ಲೋ ಇರುತ್ತಾನೆ. ನೋಡಿದಾಗ ನಮಗದರ ಅರಿವಾಗುತ್ತದೆ ಅಷ್ಟೇ.'ವಾಸ್ತವ' ಅನ್ನುವುದೇನೋ ಇರುತ್ತದೆ.
ನಾವು ನೋಡಿದಾಗ ನಮಗದರ ಅರಿವಾಗುತ್ತದೆ ಅಷ್ಟೇ.
ಆದರೆ ಅದೊಂದು ಕ್ವಾಂಟಮ್ ನಾಣ್ಯವಾಗಿದ್ದರೆ
“ಆ ನಾಣ್ಯದ ಸ್ಥಿತಿ ಹೆಡ್ ಮತ್ತು ಟೇಲ್ ಎರಡರ ಸಮ್ಮಿಳಿತವಾಗಿದ್ದು, ನೀವು ನಿಮ್ಮ ಕೈ ಬಿಡಿಸಿ ತೋರಿಸುವ
ತನಕ ಅದು ಹೆಡ್ ಆಗಿತ್ತೋ ಅಥವಾ ಟೇಲ್ ಆಗಿತ್ತೋ ಎಂದು ಹೇಳಬರುವುದಿಲ್ಲ”. ಅಂದರೆ ಇಲ್ಲಿ ಯಾವುದೇ ಭೌತಿಕ ಗುಣವನ್ನಾಗಲಿ
ಮಾಪನ ಮಾಡಿದಾಗ ಮಾತ್ರ ಅದಕ್ಕೊಂದು ನಿರ್ದಿಷ್ಟ ಮೌಲ್ಯವಿರುತ್ತದೆ. ಈ ನಾಣ್ಯ ಧರಿಸಬಹುದಾದ ಗುಣಗಳು
ಹೆಡ್ ಅಥವಾ ಟೇಲ್. ಇದಕ್ಕೆ ನೀವು ಮಾಪನ ಮಾಡುವ ತನಕ ಹೆಡ್ ಅಥವಾ ಟೇಲ್ ಎನ್ನುವ ಗುಣ ಇರುವುದಿಲ್ಲ.
ಯೋಚಿಸಿದರೆ ಆಶ್ಚರ್ಯವೆನಿಸುವ ಈ ಮಾಪನ ತತ್ವವನ್ನು ನೋಡಿ ಐನ್ ಸ್ಟೈನ್ ನೀಲ್ಸ್ ಬೋರ್ ಗೆ "ನಾನೀಗ
ಚಂದ್ರನತ್ತ ತಿರುಗಿ ನೋಡದಿದ್ದರೂ ಚಂದ್ರ ಆಕಾಶದಲ್ಲಿದ್ದಾನೆಯೇ?" ಎಂದು ಪ್ರಶ್ನಿಸಿದ್ದರು.
ಇದನ್ನು ವಿವರಿಸಲು ವಿಜ್ಞಾನಿ ಷ್ರೋಡಿಂಜರ್
ಒಂದು ಬಾಕ್ಸಿನಲ್ಲಿರುವ ಬೆಕ್ಕಿನ ಉದಾಹರಣೆಯನ್ನು ನೀಡುತ್ತಾನೆ. ಒಂದು ವಿಕಿರಣಕಾರಿ ಪದಾರ್ಥದ ಜೊತೆ
ಒಂದು ಬೆಕ್ಕನ್ನು ಒಂದು ಬಾಕ್ಸಿನಲ್ಲಿ ಇಡಲಾಗಿದೆ. ವಿಕಿರಣ ತಾಗಿದಾಕ್ಷಣ ಬೆಕ್ಕು ಸಾಯುತ್ತದೆ. ಈ
ವಿಕಿರಣಕಾರಿ ಅಣುವು ಯಾವುದೋ ಒಂದು ಗಳಿಗೆಯಲ್ಲಿ ವಿಕಿರಣ ಸೂಸುತ್ತದೆ. ಇದೊಂದು ಕ್ವಾಂಟಮ್ ಪ್ರಕ್ರಿಯೆಯಾದ್ದರಿಂದ
ಪ್ರತಿ ಗಳಿಗೆಯಲ್ಲೂ ಅದು ವಿಕಿರಣ ಸೂಸುವ ನಿರ್ದಿಷ್ಟ ಸಾಧ್ಯತೆಯಷ್ಟೇ(ಸಂಭವನೀಯ ಕ್ರಿಯೆ) ಇದೆ. ಆದ್ದರಿಂದ
ನಮಗೆ ಬಾಕ್ಸ್ ತೆಗೆಯುವ ತನಕ ಅದು ವಿಕಿರಣ್ ಸೂಸಿದೆಯೋ ಇಲ್ಲವೋ ಹೇಳ ಬರುವುದಿಲ್ಲ. ಹಾಗಾಗಿ ಬಾಕ್ಸ್
ತೆಗೆಯುವ ತನಕ ಬೆಕ್ಕಿನ ‘ಭೌತಿಕ ಸ್ಥಿತಿ’ ಸಾವು ಹಾಗೂ ಬದುಕಿನ ಸಮ್ಮಿತಿಯಾಗಿರುತ್ತದೆ, ನಮ್ಮ ಕ್ವಾಂಟಮ್ ನಾಣ್ಯದಂತೆ.
ಬೆಕ್ಕು ಸತ್ತಿಲ್ಲ. ಬದುಕಿಲ್ಲ. ಬಾಕ್ಸ್ ತೆಗೆಯುವ ತನಕ ಅದು ಸತ್ತಿದೆಯೋ ಬದುಕಿದೆಯೋ ಹೇಳಬರುವುದಿಲ್ಲ!
ಡೇವಿಡ್ ವೈನ್ಲ್ ಲ್ಯಾಂಡ್ ಇಂತಹ ಕ್ಯಾಟ್
ಸ್ಥಿತಿಗಳನ್ನು ತಮ್ಮ ಪ್ರಯೋಗಾಲಾಯದಲ್ಲಿ ಅಯಾನುಗಳು ಹಾಗೂ ವಿದ್ಯುತ್ಕಾಂತೀಯ ಕ್ಷೇತ್ರಗಳ ಮೂಲಕ ಸಾಧಿಸಿದ್ದಾರೆ.
ಒಂದು ಅಯಾನನ್ನು(ಅಯಾನು ಎಂದರೆ ಎಂದು ಎಲೆಕ್ಟ್ರಾನ್ ಕಳೆದುಕೊಂಡಿರುವ ಇಲ್ಲವೇ ಒಂದು ಇಲೆಕ್ಟ್ರಾನ್
ಹೆಚ್ಚಾಗಿ ಪಡೆದುಕೊಂಡಿರುವ ಅಣು) ಲೇಸರ್ ಬೆಳಕಿನ ಕಣಗಳಿಂದ(ಫೋಟಾನ್) ಢಿಕ್ಕಿ ಹೊಡೆಸಲಾಗುತ್ತದೆ.
ಈ ಫೋಟಾನುಗಳ ಆವೇಗದಿಂದ ಅಯಾನುಗಳ ಚಲನಶಕ್ತಿ ಕಡಿಮೆಯಾಗುತ್ತದೆ. ಅಯಾನುಗಳ ಚಲನ ಶಕ್ತಿ ಕಡಿಮೆಯಾದಂತೆ
ಅವುಗಳು ತಣ್ಣಗಾಗುತ್ತವೆ. ಹೀಗೆ ತಣ್ಣಗಾದ ಅಯಾನುಗಳನ್ನು ವಿದ್ಯುತ್ಕಾಂತೀಯ ಕ್ಷೇತ್ರಗಳ ಮೂಲಕ ಸೆರೆ
ಹಿಡಿಯಲಾಗುತ್ತದೆ. ಹೀಗೆ ಸೆರೆಹಿಡಿಯಲ್ಪಟ್ಟ ಅಯಾನುಗಳನ್ನು ನಿರ್ದಿಷ್ಟ ತರಂಗಾಂತರದ ಲೇಸರ್ ಕಿರಣಗಳಿಂದ
ಬೇರೆ ಬೇರೆ ಶಕ್ತಿ ವಲಯಗಳ ನಡುವೆ ನಿಯಂತ್ರಿಸಬಹುದಾಗಿದೆ.
ಒಂದು ಶತಮಾನದ ಕ್ವಾಂಟಮ್ ಸಿದ್ಧಾಂತದ
ಮೂಲಭೂತ ತತ್ವಗಳನ್ನು ಯೋಚನಾ ಪ್ರಯೋಗಗಳಿಂದ ರಚಿಸಲಾಗಿತ್ತು. ನಂತರ ಹಲವಾರು ಕಣಗಳ ಸ್ಥಿತಿಗಳ ಮೇಲಾದ
ಪ್ರಯೋಗಗಳನ್ನಷ್ಟೇ ನಡೆಸಲಾಗಿತ್ತು.ಆದರೆ ಮೇಲೆ ಹೇಳಿರುವ
ಡೇವಿಡ್ ವೈನ್ ಲ್ಯಾಂಡ್ ಅವರ ಪ್ರಯೋಗದಿಂದಾಗಿ ಈ ಮೂಲಭೂತ ಪ್ರಕ್ರಿಯೆಗಳನ್ನು ಮೊದಲ ಬಾರಿಗೆ ಪ್ರಾಯೋಗಿಕವಾಗಿ
ಗಮನಿಸಲು ಸಾಧ್ಯವಾಯಿತು. ಓಂದು ಅಯಾನನ್ನು ಹೀಗೆ ಸೆರೆ ಹಿಡಿಯುವುದು ಸುಲಭದ ಮಾತಲ್ಲ. ಆ ಅಯಾನು ಯಾವುದೇ
ಹೊರಗಿನ ಸ್ಥಿತಿಗಳೊಡನೆ ವರ್ತಿಸಿದರೆ ಅದರ ಕ್ವಾಂಟಮ್ ತನ ಕಳೆದು ಹೋಗಿ ಅದಕ್ಕೊಂದು ನಿರ್ದಿಷ್ಟ ಶಕ್ತಿವಲಯದ
ಸ್ಥಿತಿ ಬಂದು ಬಿಡಬಹುದು. ಅಂದರೆ ಕ್ವಾಂಟಮ್ ನಾಣ್ಯವನ್ನು ಕೈಯ ಹೊರಗಿನ ಯಾವುದೇ ಅಣುಗಳು ಕದ್ದು ನೋಡಿಬಿಟ್ಟರೆ
ಆ ನಾಣ್ಯಕ್ಕೆ ನಿರ್ದಿಷ್ಟ ಗುಣ ಬಂದುಬಿಡುತ್ತದೆ. ಹಾಗಾಗಿ ಹೊರಗಿನ ಯಾವುದೇ ಅಣುಗಳೋಡನೆ ಬಹುಕಾಲ ವರ್ತಿಸದಂತೆ
ಅಯಾನನ್ನು ಬೇರ್ಪಡಿಸಬೇಕು.ಇದು ಸಾಧ್ಯವಾಗಿರುವುದು ಒಂದು ಅಭೂತಪೂರ್ವ ಸಾಧನೆಯೇ ಸರಿ.
ಇವತ್ತಿನ ಕಂಪ್ಯೂಟರ್, ಸೂಪರ್ ಕಂಪ್ಯೂಟರ್
ಗಳೆಲ್ಲ ನ್ಯೂಟನ್, ಮ್ಯಾಕ್ಸ್ವೆಲ್ ಹೇಳಿದ ಬೌತಶಾಸ್ತ್ರವನ್ನಾಧರಿಸಿ ವರ್ತಿಸುತ್ತವೆ. ಒಂದು ಮತ್ತು
ಸೊನ್ನೆ ಎಂಬ ಬೈನರಿ ಮಾದರಿಯಲ್ಲಿ ಗಣನೆ ನಡೆಯುತ್ತದೆ.ಅಂದರೆ ಸೊನ್ನೆ ವೋಲ್ಟನ್ನು ಸೊನ್ನೆ ಎಂದೂ ಐದು
ವೋಲ್ಟನ್ನು ಒಂದು ಎಂದೂ ಕರೆದು ಟ್ರಾನ್ಸಿಸ್ಟರ್, ರೆಸಿಸ್ಟರುಗಳ ವಿದ್ಯುತ್ ಮಂಡಲಗಳ ಸಹಾಯದಿಂದ ಬೈನರಿಯಲ್ಲಿ
ಗಣನೆ ನಡೆಯುತ್ತದೆ. ಈ ಬೈನರಿ ಗಣಕದ ಒಂದು ಅಂಶವನ್ನು 'ಬಿಟ್' ಎಂದು ಕರೆಯುತ್ತೇವೆ. ಈ ಬಿಟ್ ಗೆ ಸೊನ್ನೆ
ಅಥವಾ ಒಂದು ಎಂಬ ನಿರ್ದಿಷ್ಟ ಸ್ಥಿತಿಗಳಿರುತ್ತವೆ. ಹಾಗಾಗಿ ಇವುಗಳಿಗೊಂದು 'ನಿರ್ದಿಷ್ಟ ಗುಣ'(ಒಂದು
ಅಥವಾ ಸೊನ್ನೆ) ಇರುವುದರಿಂದ ಇವು ಕ್ವಾಂಟಮ್ ವಿಜ್ಞಾನದ ಮೇಲೆ ಅವಲಂಬಿಸಿಲ್ಲ.
ಆದರೆ ಕ್ವಾಂಟಮ್ ಸಿದ್ಧಾಂತವನ್ನುಪಯೋಗಿಸಿ
ಗಣನೆ ಮಾಡಬಹುದೇ? ಅದರಿಂದ ಈ ಗಣಕಯಂತ್ರಗಳಿಂದಾ -ಗದ್ದನ್ನೇನಾದರೂ ಸಾಧಿಸಬಹುದೇ ಎಂಬ ಪ್ರಶೆಗಳು ಕಳೆದ
ಎರಡು ದಶಕಗಳಲ್ಲಿ ಭೌತಶಾಸ್ತ್ರ ಮತ್ತು ಗಣಕ ವಿಜ್ಞಾನ ನಡುವಿನ ಅಂತರವನ್ನು ಗೌಣವನ್ನಾಗಿಸಿದವು. ಕ್ವಾಂಟಮ್
ಗಣಕವಿಜ್ಞಾನವೆಂಬ ಶಾಖೆಯನ್ನು ಹುಟ್ಟುಹಾಕಿದವು. ಈ ಕ್ವಾಂಟಮ್ ಗಣಕಯಂತ್ರವನ್ನು ಸಾಧ್ಯವಾಗಿಸಲು ಕ್ವಾಂಟಮ್
ಕಣಗಳನ್ನು ಪ್ರತ್ಯೇಕವಾಗಿ ಗಮನಿಸುವುದು ಹಾಗೂ ನಿಯಂತ್ರಿಸುವುದು ಬಹು ಮುಖ್ಯ(ನಮ್ಮ ಕಂಪ್ಯೂಟರ್ರಿಗೆ
ಬಿಟ್ಟುಗಳನ್ನು ಸರ್ಕ್ಯೂಟುಗಳ ಮೂಲಕ ನಿಯಂತ್ರಿಸುವುದು ಮುಖ್ಯವಾದಂತೆ). ಈ ನಿಟ್ಟಿನಲ್ಲಿ ವೈನ್ ಲ್ಯಾಂಡ್
ರವರ ೧೯೯೫ರ ಪ್ರಯೋಗದ ನಂತರ ಬಹಳಷ್ಟು ಬೆಳವಣಿಗೆಯಾಗಿದೆ.
“ನಮ್ಮೆಲ್ಲ
ಮೂಲಭೂತ ಸಿದ್ಧಾಂತಗಳೂ ಯೋಚನಾ ಪ್ರಯೋಗಗಳ ಮೇಲಷ್ಟೇ ಅವಲಂಬಿಸಿವೆ” ಎಂದು ಕ್ವಾಂಟಮ್ ವಿಜ್ಞಾನದ ಹರಿಕಾರರಲ್ಲೊಬ್ಬನಾದ
ಷ್ರೋಡಿಂಜೆರ್ ಸಮಾಧಾನಪಟ್ಟುಕೊಂಡಿದ್ದ. ಅಷ್ಟರ ಮಟ್ಟಿಗೆ ಕ್ವಾಂಟಮ್ ಸಿದ್ಧಾಂತದ ವಿಚಿತ್ರತೆಗಳಿಗೆ
ಸಮರ್ಥನೆ ನೀಡಲೆತ್ನಿಸಿದ್ದ. ಆದರೆ ಇಂದು ಷ್ರೋಡಿಂಜೆರ್ ತನ್ನ ಗೋರಿಯಲ್ಲಿ ಸರಿದಾಡಿರಬಹುದು.
ನಾನು ಈಗ ತಾನೇ ಟಪ್ಪೆಂದು ಹೊಡೆದ
ಸೊಳ್ಳೆಯ ಜೀವನ ಚರಿತ್ರೆಯ ಬಗ್ಗೆ
ಆಲೋಚಿಸುತ್ತಾ ಕುಳಿತೆ:
ಗೋಡೆಯಿಂದ ಗೋಡೆಗೆ
ದಿಕ್ಕಿಲ್ಲದೇ ಓಡಿದ್ದು,
ಮೆಲ್ಲನೆ ಪಕ್ಕದವರ ರಕ್ತ ಹೀರಿ
ಹಸಿವು ನೀಗಿಸಿಕೊಂಡಿದ್ದು,
ಶಾಂತ ಕಿವಿಗಳಿಗೆ ಭಂಗ ತಂದಿದ್ದು,
ಬಣ್ಣ ಬಯಲಾಗುವಾಗ
ತನ್ನದೇ ಬಣ್ಣದ ಬಟ್ಟೆಗಳೊಡನೆ
ಅವಿತು ಕುಳಿತಿದ್ದು,
ನಿಂತ ನೀರಿನಲ್ಲಿ ಬದುಕಿ
ಸಂತಾನ ವೃದ್ಧಿಸಿದ್ದು,
ಹೊಲಸಿನಿಂದ ಹೊಲಸಿಗೆ ವಲಸೆಯಾಗಿದ್ದು,
ಸೊಳ್ಳೆಯ ಜೀವನ ಚರಿತ್ರೆ
ನನ್ನ ಆತ್ಮಕಥೆಯಂತಿದೆ!
ಬರೆದ ಅಕ್ಷರಗಳೆಲ್ಲ
ನೀರಿಳಿದು ಒರೆಸಿ ಹೋದ ಮೇಲೆ,
ಹೇಗೆ ಹಾಡಲಿ ಮತ್ತೆ...?
ಯಾರು ಓದಿಯಾರು ಈ
ಅರ್ಧ ವದ್ದೆಯಾದ ಪತ್ರಗಳ?
ಕೈಯಾಚೆ ನೆನಪುಗಳು
ಸರಿದು ಹೋಗುತ್ತಿವೆ...!
ನಾನು ಬತ್ತಲಾಗಲಿಲ್ಲ,
ಬರಿಯ ಬಟ್ಟೆಯಾದೆ;
ಬಟ್ಟೆ ಅಂಗಡಿಯಲ್ಲಿರುವ
ಪೊಳ್ಳು ಬೊಂಬೆ!
ಬರಿಯ
ಬಣ್ಣಗಳ ಸಂತೆ!
ಜೀವನ್ ಮತ್ತು ನಾನು ಜೀವನದಲ್ಲಿ ಮರೆಯಲಾಗದ ದಿನಗಳಲ್ಲಿ ಆ ನುಡಿಸಿರಿಯೂ ಒಂದು. ಪಿ.ಯು.ಸಿ ಪ್ರಥಮ ವರ್ಷದಲ್ಲಿದ್ದ ನಾವು ಎಚ್ಚೆಸ್ವಿ, ಬಿ.ಆರ್.ಲಕ್ಷ್ಮಣರಾವ್, ವ್ಯಾಸರಾವ್, ಜಿ. ವೆಂಕಟಸುಬ್ಬಯ್ಯ ಮುಂತಾದವರೊಡನೆ ಹಿಗ್ಗಿ ಹಿಗ್ಗಿ ಮಾತನಾಡಿದ್ದೆವು. ಅದರಲ್ಲಿ ಬಿ.ಆರ್.ಲಕ್ಷ್ಮಣರಾವ್ ನಮ್ಮೊಡನೆ ಬಿಸಿಲಲ್ಲಿ ನಿಂತು ಮೂರು ತಾಸು ಮಾತನಾಡಿದ್ದು ನಮ್ಮನ್ನು ಆಗಸಕ್ಕೇರಿಸಿಬಿಟ್ಟಿತ್ತು. ಬಿ.ಆರ್.ಎಲ್ ನಮಗೆ ಮೂರು ಮಾತ್ರೆ, ನಾಲ್ಕು ಮಾತ್ರೆಗಳ ಲಯಗಳ ಪಾಠ ಹೇಳುತ್ತಿದ್ದರೆ ಮಕ್ಕಳಾಗಿ ಕೇಳಿದ್ದೆವು. ಹಾಗಾಗಿಯೇ ಈ ವರ್ಷ ಹಾಸ್ಟೆಲ್ಲಿನ (Madhwa Hostel, Mysore) ಸಂಪಾದಕೀಯ ಮಂಡಳಿಯಲ್ಲಿ ಯಾವುದಾದರೂ ಸಾಹಿತಿಯನ್ನು ಸಂದರ್ಶಿಸೋಣ ಎಂದಾಗ ಖುಷಿಯಿಂದ "ಹೌದಲ್ಲಾ!" ಎಂದಿದ್ದೆ. ಮೊದಲು ಫೋನಾಯಿಸಿದ್ದು ಎಚ್ಚೆಸ್ವಿಯವರಿಗೆ. ಎಚ್ಚೆಸ್ವಿ ನನ್ನಜ್ಜನಿಗೆ ಮಿತ್ರರಾಗಿದ್ದು ಬಹಳ ಸಲ ಅವರ ಮನೆಗೆ ಹೋಗಿದ್ದೆ. ನನಗೆ ದೂರದ ಸಂಬಂಧವೂ ಹೌದು. ಆದರೆ ಸದಾ ಫೋನ್ ಎತ್ತುತ್ತಿದ್ದ ಅಜ್ಜ ಎಚ್ಚೆಸ್ವಿ ಬ್ಯುಸಿಯಾಗಿದ್ದರು. ಇನ್ನೇನು ಮಾಡುವುದೋ ತಿಳಿಯಲಿಲ್ಲ. ಆಗಲೇ ಬಿ.ಆರ್.ಎಲ್ ನೆನಪಾದದ್ದು. ಸಲಹೆ ನೀಡಿದ್ದ ಟೀಕು(ತಿಲಕ್ ಭಟ್) ಅಷ್ಟು ಹೊತ್ತಿಗಾಗಲೇ ಸಂದರ್ಶನ ಆದಂತೆಯೇ ಎಂಬ ನಿರ್ಧಾರಕ್ಕೆ ಬಂದಿದ್ದರು. ನಾನೂ ಹಾಗೆಯೇ ಅಂದುಕೊಂಡಿದ್ದೆ. ಕೊನೆಯ ಪ್ರಯತ್ನವೆಂಬಂತೆ ಬಿ.ಆರ್. ಲಕ್ಷ್ಮಣರಾಯರಿಗೆ ಕರೆ ಮಾಡಿದೆ. ಎರಡೇ ನಿಮಿಷದಲ್ಲಿ ಒಪ್ಪಿಯಾಗಿತ್ತು. ಸಂಪಾದಕೀಯ ಮಂಡಳಿಯಲ್ಲಿ ಸಂಭ್ರಮ! ಸಂದರ್ಶನವೇನೋ ನಿಶ್ಚಯವಾಗಿತ್ತು, ಆದರೆ ಪ್ರಶ್ನೆಗಳು? ಏನು ಅಂತ ಸಂದರ್ಶನ ಮಾಡುವುದು ಅನ್ನುವುದು ನಮಗೆ ಪ್ರಶ್ನೆಯಾಯಿತು. ನುಡಿಸಿರಿಯಲ್ಲಿ ಹಲವು ಸಾಹಿತಿಗಳ ಸಂದರ್ಶನ ಮಾಡಿದ್ದೆನಾದರೂ, ಆಗ ಸಣ್ಣವನು. ಏನೂ ಕೇಳಿದ್ದರೂ ನಡೆಯುತ್ತಿತ್ತು ಹಾಗೆಂದು ಕುಂಬ್ಳೆ ಸರ್ ಹೇಳಿ ಧೈರ್ಯ ತುಂಬಿದ್ದೂ ನೆನಪಿದೆ. ಆದರೆ ಈಗಲೋ, ಓದಿಕೊಂಡಿರಬೇಕು. ಆಷ್ಟರ ಮಟ್ಟಿಗೆ ನನಗೆ ಸ್ವಲ್ಪ ವಿಶ್ವಾಸವಿತ್ತು. ನಾನು ಬಿ.ಆರ್.ಎಲ್ ಅವರ ಸಮಗ್ರ ಭಾವಗೀತೆಗಳ ಸಂಕಲನ 'ಸುಬ್ಬಾಭಟ್ಟರ ಮಗಳೇ' (೨೦೦೫) ಓದಿಕೊಂಡಿದ್ದೆ. ಎಷ್ಟೋ ಪದ್ಯಗಳು ನನ್ನ ಮೆಚ್ಚಿನವಾಗಿದ್ದವು. ವಿಮರ್ಶೆಗಳನ್ನು ಕೂಡಾ ಓದಿದ್ದೆ ಅನ್ನಿ. ಆದರೆ ಪ್ರಶ್ನೆ ಏನೆಂದು ಕೇಳುವುದೆಂದು ಕೊನೆಗೂ ಹೊಳೆಯಲಿಲ್ಲ. ಹಾಸ್ಟೆಲ್ಲಿನಲ್ಲಿ ಬೇರೆ ಸಮಯ ಮೀರುತ್ತಿತ್ತು. ಇ-ಮೇಲ್ ಮುಖಾಂತರವೇ ಪ್ರಶ್ನೆಗಳನ್ನು ಕಳಿಸೋಣ ಎಂದುಕೊಂಡೆವು. ನನಗೆ ಧೈರ್ಯವಿರಲಿಲ್ಲ. ಮಾತಾಡ್ತಾ ಹೋದಂತೆ ಪ್ರಶ್ನೆಗಳಾದರೂ ಹುಟ್ಟುತ್ತವೆ. ಬರಿಯ ಇ-ಮೇಲ್ ಕಳಿಸುವುದಾದರೆ ತಿಳಿವು ಬೇಕು ಅನ್ನಿಸಿತು. ಏನೂ ಹೊಳೆಯದೇ ಕೊನೆಗೆ ಐ.ಕೆ. sir ಅನ್ನು ಕೇಳೋಣ ಎಂದುಕೊಂಡೆ (Sri ಐ.ಕೆ.ಬೊಳವಾರ್). ಅವರು ಕೂಡಾ ಸಿಕ್ಕಿ ಮಾತನಾಡುವುದೇ ಒಳ್ಳೆಯದೆಂದರು. ಕೆಲವು ಪ್ರಶ್ನೆಗಳನ್ನೂ ಹೇಳಿದರು. ಎಷ್ಟೋ ಧೈರ್ಯ ಬಂತು. ಇನ್ನು ಸಂದರ್ಶನ ಮಾಡಬಹುದು ಅನ್ನಿಸ್ತು. ಆ ಭಾನುವಾರದ ಬೆಂಗಳೂರು ಯಾತ್ರೆಯಲ್ಲಿ ಸಂದರ್ಶನಕ್ಕೊಂದು ಸಮಯ ದಾಖಲಾಯ್ತು. ಉಳಿದ ಸಂಪಾದಕರೆಲ್ಲ ಮುದ್ರಾ ರಾಕ್ಷಸನ ಉಪಟಳದಲ್ಲಿ ಸಂಚಿಕೆಯನ್ನು ಚಂದವಾಗಿ ತರಲು ಪ್ರಯತ್ನಿಸುತ್ತಿದ್ದರಾದ್ದರಿಂದ ಬರಲಿಲ್ಲ. ಬೆಂಗಳೂರಿನಲ್ಲಿ:
ಸರಿಯಾದ ಟೈಮಿಗೆ ಬಿ.ಆರ್.ಎಲ್ ಮನೆ ತಲುಪಿದೆ. ಮನೆ ಮುಂದೆ ಮಾತನಾಡ್ತಾ ನಿಂತಿದ್ದರು. ಒಳಗೆ ಕರೆದು ಹಣ್ಣು, ಉಪಚಾರ ಎಲ್ಲಾ ಆಯ್ತು. ನನ್ನ ಮನೆ, ಓದು, ಊರಿನ ಬಗ್ಗೆ ಎಲ್ಲಾ ಸಹಜ ಪ್ರಶ್ನೆಗಳಾದ ಮೇಲೆ, ಬಿ.ಆರ್.ಎಲ್": "ಸರಿ, ಈಗ ನನ್ನ ಸಂದರ್ಶನ ಮಾಡ್ತೀಯಾ?" ನಾನು: "ಹೂಂ ಸಾರ್" ಬಿ.ಆರ್.ಎಲ್: "ಏನು ಓದಿಕೊಂಡಿದ್ದೀಯ ನನ್ನ ಬರಹದಲ್ಲಿ?" (ಸ್ಪಷ್ಟ ಪ್ರಶ್ನೆ!) ನಾನು: "ನಿಮ್ಮ ಭಾವಗಿತೆಗಳನ್ನೆಲ್ಲ ಓದಿದ್ದೀನಿ. ಸುಬ್ಬಾಭಟ್ಟರ ಮಗಳೇ ಸಂಕಲವನ್ನು ಓದಿದ್ದೀನಿ". ಬಿ.ಆರ್.ಎಲ್: "ಗಂಭೀರ ಕವಿತೆಗಳನ್ನು, ಕಥೆ, ನಾಟಕಗಳನ್ನು ಓದಿಲ್ಲ...?" ನಾನು: ಹೌದು. ಬಿ.ಆರ್.ಎಲ್: ಸರಿ ಹಾಗಾದರೆ. ಭಾವಗೀತೆಗಳಿಗಷ್ಟೇ ಸಂದರ್ಶನವನ್ನು ಸೀಮಿತಗೊಳಿಸೋಣ, ಅಂದರು.
ಒಪ್ಪಿಕೊಂಡೆ. ನಮ್ಮ ಹಾಸ್ಟೆಲ್ಲಿನಲ್ಲಿಯೇ ಆಗಲಿ, ಭಾವಗೀತೆಗಳನ್ನು ಓದುವವರಿದ್ದಾರೆಯೇ ಹೊರತು ಗಂಭೀರ ಕಾವ್ಯಾಸಕ್ತರಿರುವುದು ಕಮ್ಮಿ. ಹಾಗಾಗಿ ನಾನೂ ಒಂದು ವಾರದಲ್ಲಿ ಬಿ.ಆರ್.ಎಲ್ ಕಾವ್ಯವನ್ನು ಓದುವ ಸಾಹಸವನ್ನು ಮಾಡಿಯೂ ಇರಲಿಲ್ಲ.
ಸರಿ. ಇಲ್ಲಿಗೆ ಬಿ.ಆರ್.ಎಲ್ ರಿಂದ ನನ್ನ ಸಂದರ್ಶನ ಮುಗಿಯಿತು. ಇನ್ನು ಅವರ ಸಂದರ್ಶನ. ನಾನು ಇಟ್ಟುಕೊಂಡಿದ್ದ ಪ್ರಶ್ನೆಗಳನ್ನೆಲ್ಲ ಹೇಳೆಂದ ಬಿ.ಆರ್.ಎಲ್. ಮಾತನಾಡುತ್ತಾ ಹೋಗಿ "ಮೊದಲ ಪ್ರಶ್ನೆಯನ್ನು ನೀನು ಈ ರೀತಿ ಕೇಳಬಹುದು, ಆಗ ನಾನು ಈ ರೀತಿ ಉತ್ತರ ಕೊಡುತ್ತೇನೆ" ಎನ್ನುತ್ತಾ ಸಂದರ್ಶನವನ್ನು ರೂಪಿಸಿದರು. ನಾನು ಮತ್ತೆ ಮಕ್ಕಳಂತೆ ಕೇಳುತ್ತಿದ್ದೆ! ಒಂದು ಗಂಟೆ ಕಳೆದದ್ದೇ ಗೊತ್ತಾಗಲಿಲ್ಲ. ಮೈಸೂರಿಗೆ ಬಂದು ಸಂದರ್ಶನದ ರೈಟ್ ಅಪ್ ಬರೆದೆ. ಚುಟುಕಾಗಿತ್ತು. ಸಂದರ್ಶನ ಇಂತಿದೆ.
ಸಂದರ್ಶನ:
೧. ಕನ್ನಡದ ಜನಪ್ರಿಯ ಭಾವಗೀತೆಗಳನ್ನು ರಚಿಸಿದವರು ನೀವು. ಆದರೆ ನವ್ಯದ ಸಂಪ್ರದಾಯದಲ್ಲಿ ಬೆಳೆದವರು. ನವ್ಯದಿಂದ ಈ ಹಾಡಬಲ್ಲಂತಹ ಭಾವಗೀತೆಗಳ ವಲಯಕ್ಕೆ ಬರಲು ಹೇಗೆ ಸಾಧ್ಯವಾಯಿತು?
ಮುಂಚಿನಿಂದಲೂ ನಮ್ಮಲ್ಲಿ ಹಾಡುಗಳಿವೆ. ಆದರೆ ಗೀತೆಗಳು ವಿಶೇಷವಾಗಿರಬೇಕಾಗಿರಲಿಲ್ಲ. ಸಂಗೀತದಿಂದ, ಹಾಡುವವನ ಸಾಮರ್ಥ್ಯದಿಂದ ಒಂದು ಮೀಡಿಯೋಕರ್ ಅನ್ನಬಹುದಾದ ಕವಿತೆಗಳನ್ನು ಬರೆದೂ ಯಶಸ್ವಿಯಾಗಬಿಡಬಹುದಾಗಿತ್ತು. ಇಂತಹ ಸಮಯದಲ್ಲಿ ಹಾಡಲ್ಲದಿದ್ದರೂ, ಸಂಗೀತವಿಲ್ಲದೆಯೂ ಒಂದು ಕವಿತೆಗೆ ತನ್ನದೇ ಆದ ಶಕ್ತಿ ಇದೆ ಎನ್ನುವ ನಿಲುವನ್ನು ಅಡಿಗರು ತಾಳಿದರು. ಇದೇ ನವ್ಯ ಚಳುವಳಿಯಲ್ಲಿ ನಾವೆಲ್ಲ ಬೆಳೆದೆವು. ಹಾಗಾಗಿ ಪ್ರಾರಂಭದಲ್ಲಿ ನಾವ್ಯಾರೂ ಭಾವಗೀತೆಗಳನ್ನು ಬರೆದಿರಲಿಲ್ಲ. ೧೯೮೨ ರಲ್ಲಿ ಮೈಸೂರು ಅನಂತಸ್ವಾಮಿ ಹಾಡುಗಳ ಒಂದು ಕ್ಯಾಸೆಟ್ ಮಾಡುತ್ತೇನೆ ಹಾಡಿದ್ದರೆ ಕೊಡಿ ಅಂತ ನಮ್ಮನ್ನು ಕೇಳಿದರು. ಆದರೆ ನಾವ್ಯಾರೂ ಅಲ್ಲಿಯ ತನಕ ಗೀತೆಗಳನ್ನು ಬರೆದಿರಲಿಲ್ಲ. ಅಷ್ಟರಲ್ಲಿ ಆಕಾಶವಾಣಿಯವರು ಸಹ ಗೀತೆಗಳ ಪ್ರಸಾರ ಮಾಡುತ್ತೇವೆ, ಭಾವಗೀತೆಗಳಿದ್ದರೆ, ಹಾಡುಗಳಿದ್ದರೆ ಕೊಡಿ ಅಂದರು. ಹೀಗಿರುವಾಗ ನಾನು ಮತ್ತು ಗೆಳೆಯ, ಎಚ್.ಎಸ್.ವಿ ನಮ್ಮ ಮೊದಲ ಭಾವಗೀತೆಗಳ ಸಂಕಲವನ್ನು ತಂದೆವು. ನನ್ನ ಸಂಕಲನ 'ಪ್ರೇಮ ಸುಳಿವ ಜಾಡು', ಎಚ್.ಎಸ್.ವಿ - 'ಮರೆತ ಸಾಲುಗಳು'. ಆಗ ನನ್ನ 'ಶ್ರುತಿ ಮೀರಿದ ಹಾಡು' ಗೀತೆಯನ್ನು ಸಿ.ಅಶ್ವತ್ಥ್ ರಾಗ ಸಂಯೋಜಿಸಿ ಹಾಡಿದರು. ಆ ಹಾಡು ಬಹಳ ಜನಪ್ರಿಯವಾಯಿತು. ಆಗಿನ್ನೂ ನನಗೆ ಅಶ್ವತ್ಥ್ ಗೆಳೆತನ ಇರಲಿಲ್ಲ. ೧೯೮೪ ರಲ್ಲಿ ನನ್ನ ಗೀತೆಗಳ ಮೊದಲ ಕ್ಯಾಸೆಟ್ 'ಕೆಂಗುಲಾಬಿ' ಬೀಡುಗಡೆಯಾಯಿತು. ನಂತರ ನಾನು, ಅಶ್ವತ್ಥ್ ಮತ್ತು ಎಚ್.ಎಸ್.ವಿ ಬಹಳ ಒಳ್ಳೆಯ ಗೆಳೆಯರಾದೆವು. ನಂತರ ಅಶ್ವತ್ಥ್ ನನ್ನ ಹಲವಾರು ಗೀತೆಗಳಿಗೆ ರಾಗ ಸಂಯೋಜನೆ ಮಾಡಿದರು. ೧೯೮೭ ರಲ್ಲಿ ಅಶ್ವತ್ಥ್ ಸಂಯೋಜನೆಯಲ್ಲಿ ನನ್ನ ಹಾಡುಗಳ 'ಸುಬ್ಬಾಭಟ್ಟರ ಮಗಳೇ' ಕ್ಯಾಸೆಟ್ ಬಂದಿತು. ಹಲವಾರು ರೀತಿಯಲ್ಲಿ ಆ ಕ್ಯಾಸೆಟ್ ದಾಖಲೆಯಾಯಿತು. ಅದರಲ್ಲಿ 'ಜಾಲಿ ಬಾರಿನಲ್ಲಿ...' ಹಾಡನ್ನು ಅಶ್ವತ್ಥ್ ಮತ್ತು ಅನಂತಸ್ವಾಮಿ ಒಟ್ಟಿಗೆ ಹಾಡಿದರು. ಅದೇ ಒಂದು ಅಪೂರ್ವ ಸಂಗತಿಯಷ್ಟೇ ಅಲ್ಲದೇ ಬೇರೆಯವರ ರಾಗ ಸಂಯೋಜನೆಯಲ್ಲಿ ಮೈಸೂರು ಅನಂತಸ್ವಾಮಿ ಹಾಡಿದ ಒಂದೇ ಹಾಡು ಅದು. ಲಹರಿ ಕಂಪನಿ ಒಂದು ಲಕ್ಷ ಕ್ಯಾಸೆಟ್ ಮಾರಾಟ ಮಾಡಿ ದಾಖಲೆಯಾಯಿತು. ೨. ಹೀಗೆ ನವ್ಯದ ಸಂದರ್ಭದಲ್ಲಿ ಭಾವಗೀತೆಗಳನ್ನು ಬರೆದ ನೀವು ನವೋದಯ ಕವಿಗಳಿಗಿಂತ ಹೇಗೆ ಭಿನ್ನರಾದಿರಿ? ನವ್ಯದ ಚಳುವಳಿಯ ಪ್ರಭಾವ ಆಗಿತ್ತೇ?
ನನ್ನ ಭಾವಗೀತೆಗಳಲ್ಲಿ ನವೋದಯದ ಮಡಿವಂತಿಕೆ, ಭಾವೋದ್ವೇಗ ಇರಲಿಲ್ಲ. ನವ್ಯ ಕವಿತೆಗಳನ್ನು ಬರೆದುಕೊಂಡು ಬಂದದ್ದರಿಂದ ಆ ಪ್ರಭಾವ ಭಾವಗೀತೆಗಳ ಮೇಲೂ ಆಯಿತು. ಬದಲಾಗಿ ನನ್ನ ಭಾವಗೀತೆಗಳಲ್ಲಿ ವಾಸ್ತವ, ಪ್ರೀತಿ, ತುಂಟತನಗಳು ಕಾಣಿಸಿಕೊಂಡವು. ವಾಸ್ತವವನ್ನು ಎದುರಿಸುವ ರೀತಿಯಲ್ಲಿ ಬಂದವು. ಹಾಗಾಗಿ ನನ್ನ ಕವಿತೆಗಳು ಭಿನ್ನ ಎನಿಸಿಕೊಂಡಿತು. ೩. ನಿಮ್ಮ ಭಾವಗೀತೆಗಳು, ಸಾಹಿತ್ಯ, ಮಾತುಗಳಲೆಲ್ಲ ಎದ್ದು ಕಾಣುವುದು ಜೀವನಪ್ರೀತಿ. ಪ್ರೀತಿಯ ಬಗ್ಗೆ ಒಂದಿಷ್ಟು...
ಪ್ರೀತಿ ಅನ್ನುವ ಕಾನ್ಸೆಪ್ಟ್ ಇದೆಯಲ್ಲಾ? ಅದು ಬೆಳೆಯುತ್ತಾ ಹೋಗುವಂತಹದ್ದು. ಚಿಕ್ಕವರಿದ್ದಾಗ ಅದು ತಂದೆ, ತಾಯಿಗೆ ಮೀಸಲಾಗಿಇರಬಹುದು, ಬೆಳೆಯುತ್ತಾ ಬಂಧುಬಳಗಕ್ಕೆ, ನಂತರ ಸಮಾಜಕ್ಕೆ, ದೇಶಕ್ಕೆ, ಇಡೀ ಬ್ರಹ್ಮಾಂಡಕ್ಕೆ ಹೀಗೆ ವಿಸ್ತರಿಸುತ್ತಾ ಹೋಗುತ್ತದೆ. ನನ್ನದೇ ಒಂದು ಕವಿತೆಯಲ್ಲಿ ಹೇಳುತ್ತೇನೆ, ಪ್ರೀತಿಯೆ ನೀರು, ಪ್ರೀತಿಯೆ ಗಾಳಿ, ಪ್ರೀತಿಯೆ ಚೈತನ್ಯ; ಪ್ರೀತಿಯ ಸೆಳೆತವ ಮೀರಿ ಹಾರಿದರೆ, ಏನಿದೆ? ಬರಿ ಶೂನ್ಯ. ಅಂದರೆ ಭೂಮಿಗೆ ಗುರುತ್ವಾಕರ್ಷಣಾ ಶಕ್ತಿ ಹೇಗೋ, ಹಾಗೇ ನಮ್ಮನ್ನು ಭೂಮಿಗೆ ಹಿಡಿದಿಟ್ಟಿರುವ ಶಕ್ತಿ ಪ್ರೀತಿ. ಅದೇ ನನ್ನ ಕವಿತೆಗಳಲ್ಲಿ, ಭಾವಗೀತೆಗಳಲ್ಲಿ, ನನ್ನೆಲ್ಲ ಸಾಹಿತ್ಯದಲ್ಲಿ ಕಾಣುತ್ತಾ ಹೋಯಿತು.
೪. ನಿಮ್ಮ ಹಾಡುಗಳಲ್ಲಿನ ವೈವಿಧ್ಯ ಬಹಳ. 'ಗಾಂಡಲೀನ', 'ಬಾ ಮಳೆಯೇ ಬಾ', 'ಸುಬ್ಬಾಭಟ್ಟರ ಮಗಳೇ', 'ನಿಂಬೆಗಿಡ', 'ಅಮ್ಮಾ ನಿನ್ನ ಎದೆಯಾಳದಲ್ಲಿ' ಹೀಗೆ ವೈವಿಧ್ಯವಾಗಿ ಬರೆದವರು ನೀವು ಈ ವೈವಿಧ್ಯತೆ ಹೇಗೆ ಸಾಧ್ಯವಾಯಿತು?
ವೈವಿಧ್ಯತೆ ಪ್ಲಾನ್ ಮಾಡಿ ಬರುವಂತಹದ್ದಲ್ಲ. ಒಬ್ಬನ ಬದುಕಿನಲ್ಲಿ ಗಂಭೀರವಾಗಿ ಯೋಚಿಸುವ ಕ್ಷಣಗಳಿದ್ದಂತೆ, ಹಾಸ್ಯದ ಕ್ಷಣಗಳಿರುತ್ತವೆ. ಪ್ರೀತಿಯ ಕ್ಷಣಗಳಿರುತ್ತವೆ. ಮನಸ್ಥಿತಿ ಬದಲಾಗುತ್ತದೆ. ಅದಕ್ಕೆ ತಕ್ಕನಾಗಿ ವೈವಿಧ್ಯತೆ ಮೂಡಿ ಬರುತ್ತದಷ್ಟೇ.
೫. ಇಂದಿನ ಗೀತೆಗಳ ಬಗ್ಗೆ, ಬರಹಗಾರರ ಬಗ್ಗೆ...
ಇಂದು ಗೀತೆಗಳನ್ನು ರಚಿಸುವಾಗ, ಕವನಗಳನ್ನು ಬರೆಯುವಾಗ ಯಾವುದೇ ಸಂಪ್ರದಾಯಗಳಿಲ್ಲದೇ ಬರೆಯಲಿಕ್ಕಿಳಿದುಬಿಡ್ತಾರೆ. ನವ್ಯದಿಂದ ಯುವಕರು ಏನು ಕಲಿತಿದ್ದಾರೆ ಎಂದರೆ ತೋಚಿದ ಗದ್ಯವನ್ನೇ ಹಲವು ಸಾಲುಗಳಲ್ಲು ಬರೆದು ಬಿಟ್ರೆ ಕವಿತೆಯಾಗಿಬಿಡುತ್ತದೆ ಎಂದು. ಹಾಡನ್ನು, ಗೀತೆಯನ್ನು ಬರೆಯಬೇಕಾದ್ರೆ ಛಂದಸ್ಸು ಬೇಕು. ಕಲಿಕೆ ಬೇಕು. ಬರೆಯುವುದಕ್ಕಿಂತ ಮುಂಚೆ ಕಾವ್ಯ ಸಂಪ್ರದಾಯಗಳ ತಿಳುವಳಿಕೆ ಇರಬೇಕು. ಹೊಸತಾಗಿ ಬರೆಯಬೇಕಿದ್ದರೂ ನಮ್ಮ ಸಂಪ್ರದಾಯದ ತಿಳುವಳಿಕೆ ನಮಗಿರಬೇಕಲ್ಲವೇ?
ಅನ್ನಿಸಿದ್ದು: ಹೀಗೆ ಈ ಒಂದು ಸಂದರ್ಶನ ನಮ್ಮ ವಾರ್ಷಿಕ ಸಂಚಿಕೆಯಲ್ಲಿ ಹಾರ್ಡ್ ಬೈಂಡ್ ನೊಂದಿಗೆ ಸುಂದರವಾಗಿ ಮೂಡಿ ಬಂತು (ಇದನ್ನು ಮತ್ತೆ ತಿಲಕ್ ಹಾಗೂ ಉಳಿದ ಸಂಪಾದಕ ಮಿತ್ರರು ಸಾಧ್ಯವಾಗಿಸಿದ್ದು). ನಮಗೆ ಒಂದಿಷ್ಟು ಹೆಮ್ಮೆ. ಸಂಚಿಕೆಗಾಗಿ ಶ್ರಮಿಸಿದ ಸಂಪಾದಕರಲ್ಲೆಲ್ಲ ಖುಶಿ. ಕೊನೆಗೆ ನಮಗೆ ಸಿಕ್ಕಿದ್ದೇನು ಎನ್ನುತ್ತೀರಾ? ಸಂದರ್ಶನ ರೂಪಿಸಿದ್ದು ನಿಮಗೇ ಈಗ ತಿಳಿಯುವಂತೆ ನಾನಲ್ಲ. ಐ.ಕೆ. sir ಮತ್ತು ಬಿ.ಆರ್.ಎಲ್, ಆದರೆ ನನಗೆ ಸಿಕ್ಕಿದ್ದು ಇಬ್ಬರಿಂದಲೂ ಒಂದಿಷ್ಟು ಕಲಿಕೆ ಹಾಗೂ ಮತ್ತೆ ಮಕ್ಕಳಂತೆ ಕೂತು ಕೇಳುವ ಅವಕಾಶ. ಹಾಗೂ ನನ್ನಿಂದ ಹಾಸ್ಟೆಲ್ಲಿನ ಮ್ಯಾಗ್ಝೀನಿಗೆ ಅಷ್ಟಾದರೂ ಮಾಡಲಾಯಿತಲ್ಲ ಎಂಬ ಸಮಾಧಾನ. ನನಗೆಷ್ಟು ಗೊತ್ತಿಲ್ಲ ಎನ್ನುವುದೂ ಗೊತ್ತಾಯಿತು, ಆದರೆ ಅದು ನಿತ್ಯ ನಡೆಯುತ್ತಿದೆ, ಆ ಪ್ರಶ್ನೆ ಬೇರೆ! ಈಗ ಬಿ.ಆರ್.ಎಲ್ ಗಂಭೀರ ಕಾವ್ಯದ ಸಂಕಲನಗಳನ್ನೂ ಓದಬೇಕೆಂದಿದ್ದೇನೆ. ಹಾಗೇ ಅಡಿಗರನ್ನು ಸಹ. ಕಾವ್ಯ ಪರಂಪರೆಯ ಅರಿವು ಬೇಕಲ್ಲವೇ? ಅದೇ ಈಗ ಮುಂದಿನ ಪಯಣ.