Pages

Saturday, March 26, 2011

ಓಟ

ಈ ಹುಚ್ಚು ಓಟದಲ್ಲಿ
ನನಗೆ ಸೋಲಿಲ್ಲ,
ಜಿಗಿದಂತೆ ಓಡಿ
ಜಗತ್ತನ್ನೇ ಗೆದ್ದೇನು...!
ಸೂರ್ಯನ ಕುದುರೆಗಳಂತೆ ಧೂಳೆಬ್ಬಿಸಿ
ಸಮಯಕ್ಕೆ ಸೆಡ್ಡು ಹೊಡೆದು ಗೆದ್ದು ಬಿಡಬಲ್ಲೆ!
ನಾನು ಬಲಿಷ್ಠ!
ಆದರೆ ಗೆದ್ದರೆ ಮುಗಿಯಿತೇ!
ಗೆದ್ದ ಫಲಕಗಳನ್ನೆಲ್ಲ
ಒಪ್ಪವಾಗಿ ಜೋಡಿಸಿದ್ದಾಯ್ತು,
ಜನ ಮತ್ತಷ್ಟು ಓಡೆಂದರು,
ಇಂದು ಓಡುತ್ತ ಜಗತ್ತನ್ನು ನೋಡಿದೆ!
ಇಲ್ಲಿ ಮನುಷ್ಯರಾರೂ ಕಾಣಲಿಲ್ಲ,
ಸುತ್ತಲೊಂದು ಜಗವನ್ನು ಕಟ್ಟಿ,
ಇನ್ನೆಲ್ಲಿಗೋ ಓಡುತ್ತಿದ್ದಾರೆ! ನನ್ನಂತೆ!
ಈ ಓಟಕ್ಕೆ ಅರ್ಥವಿದೆಯೇ?!
ಅವಸರದಲ್ಲಿ ಇನ್ನೊಬ್ಬ ಮುಂದೋಡಿದ,
"ನಿಲ್ಲು" ಎಂದೆನ್ನುವಲ್ಲೇ ಮಾಯವಾದ!
ಈಗ ಜಗತ್ತು, ಅವನಿಗೆ
ಓಡೆನ್ನುತ್ತಿರುತ್ತದೆ!



Tuesday, March 15, 2011

ಆಕಾಂಕ್ಷೆ


ಅಂದು ಕಣ್ಣೆತ್ತಿ ನೋಡಿದಾಗ,
ಅದೆಷ್ಟು ಹಕ್ಕಿಗಳು ಹಾರುತ್ತಿದ್ದವು!
ಅಬ್ಬ! ಅದೆಷ್ಟೆತ್ತರ!
ಗೂಡಿಗೆ ಮರಳಿ ಬಂದ ಅಮ್ಮನನ್ನು,
ಗೋಳು ಹೊಯ್ದಿದ್ದೆ,
"ಅಮ್ಮ ನಂಗೂ ಕಲಿಸು"
ಅವಳ ದಣಿದ ಕಣ್ಣುಗಳಲ್ಲೂ,
ಏನು ಹೆಮ್ಮೆ ಗೊತ್ತೇ?!
"ಇಷ್ಟು ಬೇಗ ಯಾಕೋ ಮರಿ?"
ಎಂದ ಅವಳ ಕಣ್ಣುಗಳಲ್ಲೂ,
"ಇಂದೇ ಯತ್ನಿಸು" ಎನ್ನುವ
ಗುಪ್ತ ಆದೇಶ

ಮರುದಿನ ಮುಂಜಾವಿನಲ್ಲೇ,
ಉತ್ಸಾಹ ಬೆಟ್ಟದಷ್ಟಾಗಿತ್ತು
ಎಷ್ಟು ಸಲ ರೆಕ್ಕೆ ಬಡಿದಿದ್ದೆನೋ?
ಕೊನೆಗೊಮ್ಮೆ ಧೈರ್ಯ ಮಾಡಿ,
ಕಾಲೆತ್ತಿ, ರೆಕ್ಕೆ ಪಟ ಪಟ ಬಡಿದು,
ಎರಡಿಂಚು ಹಾರಿ, ಜಗತ್ತನ್ನೇ ಗೆದ್ದಂತೆ
ಎದೆಯುಬ್ಬಿಸಿ ನಿಂತಿದ್ದೆ!
ಪಕ್ಕದ ಮರದ ಕಾಗಣ್ಣ
"ಷಹಬಾಸ್!" ಎಂದಿದ್ದ!
ಅಂದು ಅಮ್ಮ ಎರಡು ಕಾಳು
ಹೆಚ್ಚಿಗೆ ಕೊಟ್ಟಿದ್ದಳು, ಮರೆಯಲ್ಲಿ!

ಈಗ ನಾನು ಇನ್ನೂ ನಿಪುಣ
ಈ ಮರದಿಂದ ಆ ಮರಕ್ಕೆ ಹಾರುತ್ತೇನೆ,
ಪಕ್ಕದ ರೆಂಬೆಯ ಗುಬ್ಬಜ್ಜಿಯ
ಗೂಡಿಗೆ ಹೋಗಿ ಕಥೆ ಹೊಡೆಯುತ್ತೇನೆ
ಹಾಗೆಯೇ ಆಗಾಗ, ಕತ್ತೆತ್ತಿ ನೋಡುತ್ತೇನೆ

ಮೇಲಿರುವ ಆಕಾಶ, ಅನಂತವಿದೆ
ಎತ್ತರದಿ ಹಾರುವ ಹಕ್ಕಿಗಳೂ ಬಹಳಷ್ಟಿವೆ,
ನಾನೂ ಮೇಲಕ್ಕೆ ಹಾರಬೇಕು,
ಕಾಗಣ್ಣನಷ್ಟೇ ಅಲ್ಲ,
ಗಿಡುಗಜ್ಜನೂ "ಭಲೇ" ಅನ್ನಬೇಕು,
ಈ ಪುಟ್ಟ ರೆಕ್ಕೆಗಳನ್ನೇ ಬಿಡದೆ ಬಡಿದು,
ಸಾಧ್ಯವಾದಷ್ಟು ಬಾನನ್ನು ಚೆ೦ದವಾಗಿಸಬೇಕು,
ಜೀವ ಧನ್ಯವಾಗಬೇಕು