Pages

Tuesday, May 24, 2016

ಬುದ್ಧನ ನಗು

ಆಸೆಗಳ ತೊರೆದ ಬುದ್ಧ ದಪ್ಪಗಿದ್ದ

ಸಾವು, ಮುಪ್ಪು,
ಬದುಕಿನ ವಿಷಾದಗಳನ್ನು
ಕಂಡಿದ್ದ ಬುದ್ಧ-
ಇವನು ಅವನೇ

ಮನೆಗಳಲ್ಲಿ ನೆಲೆಯಾಗದೇ
ಅಲೆಯುತ್ತಿದ್ದವ,
ಒಂದಗಲದ ಬಟ್ಟೆಯನ್ನು ಹೇಗೋ ಸುತ್ತಿಕೊಂಡು
ಸೋಜಿಗವಾಗಿದ್ದವ
ನಗುವಿನಿಂದಲೇ ನಿರ್ವಾಣ ತಲುಪಿದ್ದನೆಂದು
ಊರಿನಲ್ಲಿ ಸುದ್ದಿಯಾದಾಗ ಯಾರೂ ನಂಬಿರಲಿಲ್ಲ

ಶಿಷ್ಯರಿರದ, ಭೋದಿಸಿರದ ಬುದ್ಧ
ಹಾರಿಹೋಗುವ ತರಗೆಲೆಗಳಲ್ಲಿ,
ಸಂಪಿಗೆ ಹೂವುಗಳಲ್ಲಿ,
ಊರೂರಿಗೆ ನಗುವನ್ನು ಪಸರಿಸಿದ್ದನೆಂದರೆ
ಇತಿಹಾಸವನ್ನೋದಿದ ನೀವು
ಒಪ್ಪಲಾರಿರಿ - ತರಗೆಲೆಗಳ
ತುಂಬೆ ನೊಣಗಳ
ಸದ್ದು ಕೇಳದಂತೆ ಕಿವುಡಾಗಿ.

ಬುದ್ಧನನ್ನು ಕಾಣಲು
ಧ್ಯಾನಿಸುವುದಲ್ಲ

ಮನಸ್ಸನ್ನು ಮರೆಯಬೇಕಿಲ್ಲ
ಸುಮ್ಮನೆ ಟೀವಿ ಆರಿಸಿ
ಫೋನ್ ಮುಚ್ಚಿಟ್ಟು
ಆರಾಮದಲ್ಲಿ ಕುಳಿತು ಆಲಿಸಿದರೆ ಸಾಕು

ಡೊಳ್ಳುಹೊಟ್ಟೆಯ ಬುದ್ಧ
ಪ್ರತ್ಯಕ್ಷನಾಗದಿದ್ದರೂ
ಪ್ರಕೃತಿಯ ಗುಂಯ್‍ಗುಡುವಿಕೆಯಲ್ಲಿ
ಬುದ್ಧನ ನಗು ಪಸರಿಸುತ್ತಿರುವುದನ್ನು-
ನೀವೇ ಕಾಣಬಹುದು


Monday, May 16, 2016

ಕ್ಲೀಷೆ

ನಮ್ಮ ಬಗ್ಗೆ ಬರೆಯುತ್ತ ಹೋದರೆ
ಕ್ಲೀಷೆಯಾಗಿಬಿಡುತ್ತದೆ:
ಎಲ್ಲವನ್ನೂ ನೋಡಿ,
ಎಲ್ಲ ಓದಿದವರಿದ್ದಾರೆ

ನಿನ್ನ ಮೌನ, ನಮ್ಮ ಮಾತು
ಒಬ್ಬರನ್ನೊಬ್ಬರು ನೆನೆದು ಹಿಗ್ಗುವುದೆಲ್ಲ
ಬರೆದು ಓದಲು ತಕ್ಕದ್ದಲ್ಲ-
ಎನ್ನುವಾಗ,

ನಾವು ಹಳೆಯ ಇಂಗ್ಲಿಷ್
ಕ್ಲಾಸಿಕ್ಕೊಂದನ್ನು ಹಿಡಿದು,
ಓದುವ, ವಿಮರ್ಶಿಸುವ,
ಒಬ್ಬರಿಗೊಬ್ಬರು ವಿವರಿಸುವ
ತಮಾಷೆ ನಡೆಸಬಹುದು

Tuesday, March 22, 2016

ಕೂತು ಮಾತನಾಡಬೇಕಿದೆ,
ಕೂತೇ ಮಾತನಾಡಬೇಕು,


ಒಂದು ದೀರ್ಘ ಉಸಿರೆಳೆದುಕೊಳ್ಳಬೇಕು,
ಹುಲ್ಲೋ ಮಣ್ಣೋ ಸಿಗುವಂತಹ ಜಾಗದಲ್ಲಿ
ಕೈ ಊರಬೇಕು,
ಕಣ್ಹೊರಳಿಸಿ, ಎಡ ಬಲ ತಿರುಗಿಸಿ, ಕಣ್ಮುಚ್ಚಿ,
ಕೈಯುಜ್ಜಿ, ಬಿಸಿಯಾದಂತೇ ಕಣ್ಣಿಗಿಟ್ಟು,
ನಿಧಾನವಾಗಿ ತೆರೆಯಬೇಕು,
ಇಷ್ಟು ಸಿದ್ಧತೆ ಬೇಕು.

--

ಬಿಡುವಿಲ್ಲದೇ ಬೆರಳುಗಳಲ್ಲಿ
ಕುಟ್ಟುತ್ತ ಕುಟ್ಟುತ್ತ
ಕಣ್ಣುಗಳು ಕೆಂಪಾದವು,
ಕೈ ನಡುಗಿತು, ಸೋತಿತು,
ಬೆನ್ನು ಡೊಂಕಾದರೂ
ಎದೆಗಳು ಉಬ್ಬಿಯೇ ಇವೆ,
ಚನ್ನಕೇಶವ ಹೀಗೆ ಒಲಿಯುವುದಿಲ್ಲ

--

ಪರಸ್ಪರ ಪದಗಳೂ, ಬಣ್ಣಗಳೂ ಆಗಿದ್ದೇವೆ,
ಕೆಂಪಾದ ಕಣ್ಣುಗಳೂ, ಉಬ್ಬಿದ ಎದೆಗಳೂ,
ನ್ಯೂರಾನುಗಳಲ್ಲಿನ ಮಿಂಚುಗಳ ದಿಕ್ಕು ತಪ್ಪಿಸಿ
ಸಿನಾಸ್ತೇಶಿಯಾ ಆಗಿಸಿವೆ,
ಇದರಲ್ಲಿ ಮಾತುಗಳು ಬಣ್ಣಗಳಾಗಿವೆ,
ನೀವು ನಾನು ಪದಗಳಾಗಿ,
ಡಿಕ್ಷಿನರಿ ಸೇರಲು ಕಾದು ಕುಳಿತಿದ್ದೇವೆ

--

ಇಲ್ಲಿಂದ ಸುಮಾರು ದೂರ ಹೋಗಬೇಕು

--

ಬೀದಿದೀಪಗಳ ಮುಸುಕಿನಲ್ಲಿ
ನಮ್ಮ ಇರುವಿನ ಸತ್ಯಗಳು ಮಂಕಾಗಿ,
ಕ್ಷೀಣವಾಗಿ ಮಿಣುಕುತ್ತಿವೆ,

ಪದ್ಮಾಸನ  ಬೇಡ,
ಹೇಗೋ ಒಟ್ಟು ಏಳಲು ಮನಸ್ಸಾಗದಂತೆ ಕೂತು

ಮಾತನಾಡಬೇಕಿದೆ