Pages

Sunday, February 2, 2014

ಪೋಲಿಂಗ್ ಬೂತಿನ ಮುಂದೆ


ಯಾವುದೋ ಅಂಗಡಿಯ ಮೇಲೆ
ಯಾರೋ ಹಚ್ಚಿದ
ಯಾವುದೋ ಬಣ್ಣಗಳ ಬಾವುಟ
ಪ್ರತಿಯಾಗಿ ಇನ್ನೊಂದು ಬಾವುಟ
ಇನ್ನೊಂದು ಬಣ್ಣ

ಪೋಲಿಂಗ್ ಬೂತಿನ ಮುಂದೆ
ನಿಂತ ಅಣ್ಣ ತಂಗಿಯರು
ಬೇಕಾದ ಬಣ್ಣಗಳಲ್ಲಿ ಆರ್ಡರ್
ಮಾಡುತ್ತಿದ್ದಾರೆ
ಹಸಿರು ಸತ್ಯ,
ಕೇಸರಿ ಸತ್ಯ,
ಕೆಂಪು ಸತ್ಯ,
ಸತ್ಯಮೇವ ಜಯತೇ!
-----

ಏತನ್ಮಧ್ಯೆ ನೂರಿನ್ನೂರು
ನ್ಯಾನೋ ಮೀಟರು
ಉದ್ದಗಿಡ್ಡದ ಅಲೆಗಳು
ಓಡುತ್ತಲೇ ಇವೆ

ಉದ್ದವಿದ್ದವು ತಣ್ಣನೆ,
ಗಿಡ್ಡವಿದ್ದವು ಸರ್ರನೆ,
ಅಂತೂ ಒಡಗೂಡಿ
ಅಸೀಮ ವೇಗದಲಿ

ನ್ಯೂಟನ್ನಿನ ಪ್ರಿಸಮ್ಮಿನ ಪ್ರಜೆಗಳಿಗೆ
ತಾವು ಬಣ್ಣಗಳಾಗಿರುವ
ಸುದ್ದಿಯೇ ಗೊತ್ತಿರಲಿಕ್ಕಿಲ್ಲ
------

ಪೋಲಿಂಗ್ ಬೂತಿನ ಮುಂದೆ
ಮಸುಬಾದ ಅಪಭ್ರಂಶದ
ಕಾರ್ಡಿನ ಪ್ರಜೆ
ನಿಂತಿದ್ದೇನೆ ಗ್ರಾಹಕನಾಗಿ

ಕೈ ಇಂಕಾದೊಡನೆ ಇಂಕಿಸಬೇಕಿದೆ
ಈ ಇಂಕಿಗೆ ಬಣ್ಣ ಬಳಿದೇ ತೀರಬೇಕಿದೆ
ಇಂದಿನ ಹೋಳಿಗೆ
ಒಂದೇ ಬಣ್ಣ!

ತಿರುತಿರುಗುವ ದಿಕ್ಸೂಚಿಯ
ಹಿಡಿದು ನಡಗುತ್ತೇನೆ
ಇತಿಹಾಸ ಭವಿಷ್ಯದ
ನಡುವಿನ ಬಿಂದುವಿನಂತೆ-
ಮುಂದೆ ಸಾಗಲೇ ಬೇಕಿದೆ
ಷರಾ ಬರೆದು
ಒಂದಿಲ್ಲೊಂದು ಕಡೆ!

“ಅರೇಬಿಯಾದ ಯಾವ ಸೆಂಟುಗಳೂ
ಈ ಬಣ್ಣದ ಕಲೆಗಳನ್ನು ನಿವಾರಿಸವು”