Pages

Tuesday, November 22, 2011

ಬಣ್ಣಗಳ ಸಂತೆ




ಬರೆದ ಅಕ್ಷರಗಳೆಲ್ಲ
ನೀರಿಳಿದು ಒರೆಸಿ ಹೋದ ಮೇಲೆ,
ಹೇಗೆ ಹಾಡಲಿ ಮತ್ತೆ...?
ಯಾರು ಓದಿಯಾರು ಈ
ಅರ್ಧ ವದ್ದೆಯಾದ ಪತ್ರಗಳ?
ಕೈಯಾಚೆ ನೆನಪುಗಳು
ಸರಿದು ಹೋಗುತ್ತಿವೆ...!
ನಾನು ಬತ್ತಲಾಗಲಿಲ್ಲ,
ಬರಿಯ ಬಟ್ಟೆಯಾದೆ;
ಬಟ್ಟೆ ಅಂಗಡಿಯಲ್ಲಿರುವ
ಪೊಳ್ಳು ಬೊಂಬೆ!
ಬರಿಯ
ಬಣ್ಣಗಳ ಸಂತೆ!

Monday, November 14, 2011

ಸಂದರ್ಶನ: ಬಿ.ಆರ್.ಲಕ್ಷ್ಮಣರಾವ್ ಜೊತೆ ಒಂದಿಷ್ಟು ಮಾತು

             ಜೀವನ್ ಮತ್ತು ನಾನು ಜೀವನದಲ್ಲಿ ಮರೆಯಲಾಗದ ದಿನಗಳಲ್ಲಿ ಆ ನುಡಿಸಿರಿಯೂ ಒಂದು. ಪಿ.ಯು.ಸಿ ಪ್ರಥಮ ವರ್ಷದಲ್ಲಿದ್ದ ನಾವು ಎಚ್ಚೆಸ್ವಿ, ಬಿ.ಆರ್.ಲಕ್ಷ್ಮಣರಾವ್, ವ್ಯಾಸರಾವ್, ಜಿ. ವೆಂಕಟಸುಬ್ಬಯ್ಯ ಮುಂತಾದವರೊಡನೆ ಹಿಗ್ಗಿ ಹಿಗ್ಗಿ ಮಾತನಾಡಿದ್ದೆವು. ಅದರಲ್ಲಿ ಬಿ.ಆರ್.ಲಕ್ಷ್ಮಣರಾವ್ ನಮ್ಮೊಡನೆ ಬಿಸಿಲಲ್ಲಿ ನಿಂತು ಮೂರು ತಾಸು ಮಾತನಾಡಿದ್ದು ನಮ್ಮನ್ನು ಆಗಸಕ್ಕೇರಿಸಿಬಿಟ್ಟಿತ್ತು. ಬಿ.ಆರ್.ಎಲ್ ನಮಗೆ ಮೂರು ಮಾತ್ರೆ, ನಾಲ್ಕು ಮಾತ್ರೆಗಳ ಲಯಗಳ ಪಾಠ ಹೇಳುತ್ತಿದ್ದರೆ ಮಕ್ಕಳಾಗಿ ಕೇಳಿದ್ದೆವು.
             ಹಾಗಾಗಿಯೇ ಈ ವರ್ಷ ಹಾಸ್ಟೆಲ್ಲಿನ (Madhwa Hostel, Mysore) ಸಂಪಾದಕೀಯ ಮಂಡಳಿಯಲ್ಲಿ  ಯಾವುದಾದರೂ ಸಾಹಿತಿಯನ್ನು ಸಂದರ್ಶಿಸೋಣ ಎಂದಾಗ ಖುಷಿಯಿಂದ "ಹೌದಲ್ಲಾ!" ಎಂದಿದ್ದೆ. ಮೊದಲು ಫೋನಾಯಿಸಿದ್ದು ಎಚ್ಚೆಸ್ವಿಯವರಿಗೆ. ಎಚ್ಚೆಸ್ವಿ ನನ್ನಜ್ಜನಿಗೆ ಮಿತ್ರರಾಗಿದ್ದು ಬಹಳ ಸಲ ಅವರ ಮನೆಗೆ ಹೋಗಿದ್ದೆ. ನನಗೆ ದೂರದ ಸಂಬಂಧವೂ ಹೌದು. ಆದರೆ ಸದಾ ಫೋನ್ ಎತ್ತುತ್ತಿದ್ದ ಅಜ್ಜ ಎಚ್ಚೆಸ್ವಿ ಬ್ಯುಸಿಯಾಗಿದ್ದರು. ಇನ್ನೇನು ಮಾಡುವುದೋ ತಿಳಿಯಲಿಲ್ಲ. ಆಗಲೇ ಬಿ.ಆರ್.ಎಲ್ ನೆನಪಾದದ್ದು. ಸಲಹೆ ನೀಡಿದ್ದ ಟೀಕು(ತಿಲಕ್ ಭಟ್) ಅಷ್ಟು ಹೊತ್ತಿಗಾಗಲೇ ಸಂದರ್ಶನ ಆದಂತೆಯೇ ಎಂಬ ನಿರ್ಧಾರಕ್ಕೆ ಬಂದಿದ್ದರು. ನಾನೂ ಹಾಗೆಯೇ ಅಂದುಕೊಂಡಿದ್ದೆ. ಕೊನೆಯ ಪ್ರಯತ್ನವೆಂಬಂತೆ ಬಿ.ಆರ್. ಲಕ್ಷ್ಮಣರಾಯರಿಗೆ ಕರೆ ಮಾಡಿದೆ. ಎರಡೇ ನಿಮಿಷದಲ್ಲಿ ಒಪ್ಪಿಯಾಗಿತ್ತು. ಸಂಪಾದಕೀಯ ಮಂಡಳಿಯಲ್ಲಿ ಸಂಭ್ರಮ!
              ಸಂದರ್ಶನವೇನೋ ನಿಶ್ಚಯವಾಗಿತ್ತು, ಆದರೆ ಪ್ರಶ್ನೆಗಳು? ಏನು ಅಂತ ಸಂದರ್ಶನ ಮಾಡುವುದು ಅನ್ನುವುದು ನಮಗೆ ಪ್ರಶ್ನೆಯಾಯಿತು. ನುಡಿಸಿರಿಯಲ್ಲಿ ಹಲವು ಸಾಹಿತಿಗಳ ಸಂದರ್ಶನ ಮಾಡಿದ್ದೆನಾದರೂ, ಆಗ ಸಣ್ಣವನು. ಏನೂ ಕೇಳಿದ್ದರೂ ನಡೆಯುತ್ತಿತ್ತು ಹಾಗೆಂದು ಕುಂಬ್ಳೆ ಸರ್ ಹೇಳಿ ಧೈರ್ಯ ತುಂಬಿದ್ದೂ ನೆನಪಿದೆ. ಆದರೆ ಈಗಲೋ, ಓದಿಕೊಂಡಿರಬೇಕು. ಆಷ್ಟರ ಮಟ್ಟಿಗೆ ನನಗೆ ಸ್ವಲ್ಪ ವಿಶ್ವಾಸವಿತ್ತು. ನಾನು ಬಿ.ಆರ್.ಎಲ್ ಅವರ ಸಮಗ್ರ ಭಾವಗೀತೆಗಳ ಸಂಕಲನ 'ಸುಬ್ಬಾಭಟ್ಟರ ಮಗಳೇ' (೨೦೦೫) ಓದಿಕೊಂಡಿದ್ದೆ. ಎಷ್ಟೋ ಪದ್ಯಗಳು ನನ್ನ ಮೆಚ್ಚಿನವಾಗಿದ್ದವು. ವಿಮರ್ಶೆಗಳನ್ನು ಕೂಡಾ ಓದಿದ್ದೆ ಅನ್ನಿ. ಆದರೆ ಪ್ರಶ್ನೆ ಏನೆಂದು ಕೇಳುವುದೆಂದು ಕೊನೆಗೂ ಹೊಳೆಯಲಿಲ್ಲ.
               ಹಾಸ್ಟೆಲ್ಲಿನಲ್ಲಿ ಬೇರೆ ಸಮಯ ಮೀರುತ್ತಿತ್ತು. ಇ-ಮೇಲ್ ಮುಖಾಂತರವೇ ಪ್ರಶ್ನೆಗಳನ್ನು ಕಳಿಸೋಣ ಎಂದುಕೊಂಡೆವು. ನನಗೆ ಧೈರ್ಯವಿರಲಿಲ್ಲ. ಮಾತಾಡ್ತಾ ಹೋದಂತೆ ಪ್ರಶ್ನೆಗಳಾದರೂ ಹುಟ್ಟುತ್ತವೆ. ಬರಿಯ ಇ-ಮೇಲ್ ಕಳಿಸುವುದಾದರೆ ತಿಳಿವು ಬೇಕು ಅನ್ನಿಸಿತು. ಏನೂ ಹೊಳೆಯದೇ ಕೊನೆಗೆ ಐ.ಕೆ. sir ಅನ್ನು ಕೇಳೋಣ ಎಂದುಕೊಂಡೆ (Sri ಐ.ಕೆ.ಬೊಳವಾರ್). ಅವರು ಕೂಡಾ ಸಿಕ್ಕಿ ಮಾತನಾಡುವುದೇ ಒಳ್ಳೆಯದೆಂದರು. ಕೆಲವು ಪ್ರಶ್ನೆಗಳನ್ನೂ ಹೇಳಿದರು. ಎಷ್ಟೋ ಧೈರ್ಯ ಬಂತು. ಇನ್ನು ಸಂದರ್ಶನ ಮಾಡಬಹುದು ಅನ್ನಿಸ್ತು. ಆ ಭಾನುವಾರದ ಬೆಂಗಳೂರು ಯಾತ್ರೆಯಲ್ಲಿ ಸಂದರ್ಶನಕ್ಕೊಂದು ಸಮಯ ದಾಖಲಾಯ್ತು. ಉಳಿದ ಸಂಪಾದಕರೆಲ್ಲ ಮುದ್ರಾ ರಾಕ್ಷಸನ ಉಪಟಳದಲ್ಲಿ ಸಂಚಿಕೆಯನ್ನು ಚಂದವಾಗಿ ತರಲು ಪ್ರಯತ್ನಿಸುತ್ತಿದ್ದರಾದ್ದರಿಂದ ಬರಲಿಲ್ಲ.

ಬೆಂಗಳೂರಿನಲ್ಲಿ:



ಸರಿಯಾದ ಟೈಮಿಗೆ ಬಿ.ಆರ್.ಎಲ್ ಮನೆ ತಲುಪಿದೆ. ಮನೆ ಮುಂದೆ ಮಾತನಾಡ್ತಾ ನಿಂತಿದ್ದರು. ಒಳಗೆ ಕರೆದು ಹಣ್ಣು, ಉಪಚಾರ ಎಲ್ಲಾ ಆಯ್ತು. ನನ್ನ ಮನೆ, ಓದು, ಊರಿನ ಬಗ್ಗೆ ಎಲ್ಲಾ ಸಹಜ ಪ್ರಶ್ನೆಗಳಾದ ಮೇಲೆ,


ಬಿ.ಆರ್.ಎಲ್": "ಸರಿ, ಈಗ ನನ್ನ ಸಂದರ್ಶನ ಮಾಡ್ತೀಯಾ?"
ನಾನು: "ಹೂಂ ಸಾರ್"
ಬಿ.ಆರ್.ಎಲ್: "ಏನು ಓದಿಕೊಂಡಿದ್ದೀಯ ನನ್ನ ಬರಹದಲ್ಲಿ?" (ಸ್ಪಷ್ಟ ಪ್ರಶ್ನೆ!)
ನಾನು: "ನಿಮ್ಮ ಭಾವಗಿತೆಗಳನ್ನೆಲ್ಲ ಓದಿದ್ದೀನಿ. ಸುಬ್ಬಾಭಟ್ಟರ ಮಗಳೇ ಸಂಕಲವನ್ನು ಓದಿದ್ದೀನಿ".
ಬಿ.ಆರ್.ಎಲ್: "ಗಂಭೀರ ಕವಿತೆಗಳನ್ನು, ಕಥೆ, ನಾಟಕಗಳನ್ನು ಓದಿಲ್ಲ...?"
ನಾನು: ಹೌದು.
ಬಿ.ಆರ್.ಎಲ್: ಸರಿ ಹಾಗಾದರೆ. ಭಾವಗೀತೆಗಳಿಗಷ್ಟೇ ಸಂದರ್ಶನವನ್ನು ಸೀಮಿತಗೊಳಿಸೋಣ,  ಅಂದರು.


ಒಪ್ಪಿಕೊಂಡೆ. ನಮ್ಮ ಹಾಸ್ಟೆಲ್ಲಿನಲ್ಲಿಯೇ ಆಗಲಿ, ಭಾವಗೀತೆಗಳನ್ನು ಓದುವವರಿದ್ದಾರೆಯೇ ಹೊರತು ಗಂಭೀರ ಕಾವ್ಯಾಸಕ್ತರಿರುವುದು ಕಮ್ಮಿ. ಹಾಗಾಗಿ ನಾನೂ ಒಂದು ವಾರದಲ್ಲಿ ಬಿ.ಆರ್.ಎಲ್ ಕಾವ್ಯವನ್ನು ಓದುವ ಸಾಹಸವನ್ನು ಮಾಡಿಯೂ ಇರಲಿಲ್ಲ.

ಸರಿ. ಇಲ್ಲಿಗೆ ಬಿ.ಆರ್.ಎಲ್ ರಿಂದ ನನ್ನ ಸಂದರ್ಶನ ಮುಗಿಯಿತು. ಇನ್ನು ಅವರ ಸಂದರ್ಶನ. ನಾನು ಇಟ್ಟುಕೊಂಡಿದ್ದ ಪ್ರಶ್ನೆಗಳನ್ನೆಲ್ಲ ಹೇಳೆಂದ ಬಿ.ಆರ್.ಎಲ್. ಮಾತನಾಡುತ್ತಾ ಹೋ
ಗಿ "ಮೊದಲ ಪ್ರಶ್ನೆಯನ್ನು ನೀನು ಈ ರೀತಿ ಕೇಳಬಹುದು, ಆಗ ನಾನು ಈ ರೀತಿ ಉತ್ತರ ಕೊಡುತ್ತೇನೆ" ಎನ್ನುತ್ತಾ ಸಂದರ್ಶನವನ್ನು ರೂಪಿಸಿದರು. ನಾನು ಮತ್ತೆ ಮಕ್ಕಳಂತೆ ಕೇಳುತ್ತಿದ್ದೆ!
ಒಂದು ಗಂಟೆ ಕಳೆದದ್ದೇ ಗೊತ್ತಾಗಲಿಲ್ಲ. ಮೈಸೂರಿಗೆ ಬಂದು ಸಂದರ್ಶನದ ರೈಟ್ ಅಪ್ ಬರೆದೆ. ಚುಟುಕಾಗಿತ್ತು. ಸಂದರ್ಶನ ಇಂತಿದೆ. 


ಸಂದರ್ಶನ:


೧. ಕನ್ನಡದ ಜನಪ್ರಿಯ ಭಾವಗೀತೆಗಳನ್ನು ರಚಿಸಿದವರು ನೀವು. ಆದರೆ ನವ್ಯದ ಸಂಪ್ರದಾಯದಲ್ಲಿ ಬೆಳೆದವರು. ನವ್ಯದಿಂದ ಈ ಹಾಡಬಲ್ಲಂತಹ ಭಾವಗೀತೆಗಳ ವಲಯಕ್ಕೆ ಬರಲು ಹೇಗೆ ಸಾಧ್ಯವಾಯಿತು?


    ಮುಂಚಿನಿಂದಲೂ ನಮ್ಮಲ್ಲಿ ಹಾಡುಗಳಿವೆ. ಆದರೆ ಗೀತೆಗಳು ವಿಶೇಷವಾಗಿರಬೇಕಾಗಿರಲಿಲ್ಲ. ಸಂಗೀತದಿಂದ, ಹಾಡುವವನ ಸಾಮರ್ಥ್ಯದಿಂದ ಒಂದು ಮೀಡಿಯೋಕರ್ ಅನ್ನಬಹುದಾದ ಕವಿತೆಗಳನ್ನು ಬರೆದೂ ಯಶಸ್ವಿಯಾಗಬಿಡಬಹುದಾಗಿತ್ತು. ಇಂತಹ ಸಮಯದಲ್ಲಿ ಹಾಡಲ್ಲದಿದ್ದರೂ, ಸಂಗೀತವಿಲ್ಲದೆಯೂ ಒಂದು ಕವಿತೆಗೆ ತನ್ನದೇ ಆದ ಶಕ್ತಿ ಇದೆ ಎನ್ನುವ ನಿಲುವನ್ನು ಅಡಿಗರು ತಾಳಿದರು. ಇದೇ ನವ್ಯ ಚಳುವಳಿಯಲ್ಲಿ ನಾವೆಲ್ಲ ಬೆಳೆದೆವು.
    ಹಾಗಾಗಿ ಪ್ರಾರಂಭದಲ್ಲಿ ನಾವ್ಯಾರೂ ಭಾವಗೀತೆಗಳನ್ನು ಬರೆದಿರಲಿಲ್ಲ. ೧೯೮೨ ರಲ್ಲಿ ಮೈಸೂರು ಅನಂತಸ್ವಾಮಿ ಹಾಡುಗಳ ಒಂದು ಕ್ಯಾಸೆಟ್ ಮಾಡುತ್ತೇನೆ ಹಾಡಿದ್ದರೆ ಕೊಡಿ ಅಂತ ನಮ್ಮನ್ನು ಕೇಳಿದರು. ಆದರೆ ನಾವ್ಯಾರೂ ಅಲ್ಲಿಯ ತನಕ ಗೀತೆಗಳನ್ನು ಬರೆದಿರಲಿಲ್ಲ. ಅಷ್ಟರಲ್ಲಿ ಆಕಾಶವಾಣಿಯವರು ಸಹ ಗೀತೆಗಳ ಪ್ರಸಾರ ಮಾಡುತ್ತೇವೆ, ಭಾವಗೀತೆಗಳಿದ್ದರೆ, ಹಾಡುಗಳಿದ್ದರೆ ಕೊಡಿ ಅಂದರು. ಹೀಗಿರುವಾಗ ನಾನು ಮತ್ತು ಗೆಳೆಯ, ಎಚ್.ಎಸ್.ವಿ ನಮ್ಮ ಮೊದಲ ಭಾವಗೀತೆಗಳ ಸಂಕಲವನ್ನು ತಂದೆವು. ನನ್ನ ಸಂಕಲನ 'ಪ್ರೇಮ ಸುಳಿವ ಜಾಡು', ಎಚ್.ಎಸ್.ವಿ - 'ಮರೆತ ಸಾಲುಗಳು'. ಆಗ ನನ್ನ 'ಶ್ರುತಿ ಮೀರಿದ ಹಾಡು' ಗೀತೆಯನ್ನು ಸಿ.ಅಶ್ವತ್ಥ್ ರಾಗ ಸಂಯೋಜಿಸಿ ಹಾಡಿದರು. ಆ ಹಾಡು ಬಹಳ ಜನಪ್ರಿಯವಾಯಿತು. ಆಗಿನ್ನೂ ನನಗೆ ಅಶ್ವತ್ಥ್ ಗೆಳೆತನ ಇರಲಿಲ್ಲ. ೧೯೮೪ ರಲ್ಲಿ ನನ್ನ ಗೀತೆಗಳ ಮೊದಲ ಕ್ಯಾಸೆಟ್ 'ಕೆಂಗುಲಾಬಿ' ಬೀಡುಗಡೆಯಾಯಿತು. ನಂತರ ನಾನು, ಅಶ್ವತ್ಥ್ ಮತ್ತು ಎಚ್.ಎಸ್.ವಿ ಬಹಳ ಒಳ್ಳೆಯ ಗೆಳೆಯರಾದೆವು. ನಂತರ ಅಶ್ವತ್ಥ್ ನನ್ನ ಹಲವಾರು ಗೀತೆಗಳಿಗೆ ರಾಗ ಸಂಯೋಜನೆ ಮಾಡಿದರು.
    ೧೯೮೭ ರಲ್ಲಿ ಅಶ್ವತ್ಥ್ ಸಂಯೋಜನೆಯಲ್ಲಿ ನನ್ನ ಹಾಡುಗಳ 'ಸುಬ್ಬಾಭಟ್ಟರ ಮಗಳೇ' ಕ್ಯಾಸೆಟ್ ಬಂದಿತು. ಹಲವಾರು ರೀತಿಯಲ್ಲಿ ಆ ಕ್ಯಾಸೆಟ್ ದಾಖಲೆಯಾಯಿತು. ಅದರಲ್ಲಿ 'ಜಾಲಿ ಬಾರಿನಲ್ಲಿ...' ಹಾಡನ್ನು ಅಶ್ವತ್ಥ್ ಮತ್ತು ಅನಂತಸ್ವಾಮಿ ಒಟ್ಟಿಗೆ ಹಾಡಿದರು. ಅದೇ ಒಂದು ಅಪೂರ್ವ ಸಂಗತಿಯಷ್ಟೇ ಅಲ್ಲದೇ ಬೇರೆಯವರ ರಾಗ ಸಂಯೋಜನೆಯಲ್ಲಿ ಮೈಸೂರು ಅನಂತಸ್ವಾಮಿ ಹಾಡಿದ ಒಂದೇ ಹಾಡು ಅದು. ಲಹರಿ ಕಂಪನಿ ಒಂದು ಲಕ್ಷ ಕ್ಯಾಸೆಟ್ ಮಾರಾಟ ಮಾಡಿ ದಾಖಲೆಯಾಯಿತು.

೨. ಹೀಗೆ ನವ್ಯದ ಸಂದರ್ಭದಲ್ಲಿ ಭಾವಗೀತೆಗಳನ್ನು ಬರೆದ ನೀವು ನವೋದಯ ಕವಿಗಳಿಗಿಂತ ಹೇಗೆ ಭಿನ್ನರಾದಿರಿ? ನವ್ಯದ  ಚಳುವಳಿಯ ಪ್ರಭಾವ ಆಗಿತ್ತೇ?


ನನ್ನ ಭಾವಗೀತೆಗಳಲ್ಲಿ ನವೋದಯದ ಮಡಿವಂತಿಕೆ, ಭಾವೋದ್ವೇಗ ಇರಲಿಲ್ಲ. ನವ್ಯ ಕವಿತೆಗಳನ್ನು ಬರೆದುಕೊಂಡು ಬಂದದ್ದರಿಂದ ಆ ಪ್ರಭಾವ ಭಾವಗೀತೆಗಳ ಮೇಲೂ ಆಯಿತು. ಬದಲಾಗಿ ನನ್ನ ಭಾವಗೀತೆಗಳಲ್ಲಿ ವಾಸ್ತವ, ಪ್ರೀತಿ, ತುಂಟತನಗಳು ಕಾಣಿಸಿಕೊಂಡವು. ವಾಸ್ತವವನ್ನು ಎದುರಿಸುವ ರೀತಿಯಲ್ಲಿ ಬಂದವು. ಹಾಗಾಗಿ ನನ್ನ ಕವಿತೆಗಳು ಭಿನ್ನ ಎನಿಸಿಕೊಂಡಿತು.

೩. ನಿಮ್ಮ ಭಾವಗೀತೆಗಳು, ಸಾಹಿತ್ಯ, ಮಾತುಗಳಲೆಲ್ಲ ಎದ್ದು ಕಾಣುವುದು ಜೀವನಪ್ರೀತಿ. ಪ್ರೀತಿಯ ಬಗ್ಗೆ ಒಂದಿಷ್ಟು..
.

ಪ್ರೀತಿ ಅನ್ನುವ ಕಾನ್ಸೆಪ್ಟ್ ಇದೆಯಲ್ಲಾ? ಅದು ಬೆಳೆಯುತ್ತಾ ಹೋಗುವಂತಹದ್ದು. ಚಿಕ್ಕವರಿದ್ದಾಗ ಅದು ತಂದೆ, ತಾಯಿಗೆ ಮೀಸಲಾಗಿಇರಬಹುದು, ಬೆಳೆಯುತ್ತಾ ಬಂಧುಬಳಗಕ್ಕೆ, ನಂತರ ಸಮಾಜಕ್ಕೆ, ದೇಶಕ್ಕೆ, ಇಡೀ ಬ್ರಹ್ಮಾಂಡಕ್ಕೆ ಹೀಗೆ ವಿಸ್ತರಿಸುತ್ತಾ ಹೋಗುತ್ತದೆ. ನನ್ನದೇ ಒಂದು ಕವಿತೆಯಲ್ಲಿ ಹೇಳುತ್ತೇನೆ,
                        ಪ್ರೀತಿಯೆ ನೀರು, ಪ್ರೀ
ತಿಯೆ ಗಾಳಿ,
                        ಪ್ರೀತಿಯೆ ಚೈತನ್ಯ;
                        ಪ್ರೀತಿಯ ಸೆಳೆತವ ಮೀರಿ ಹಾರಿದರೆ,
                        ಏನಿದೆ? ಬರಿ ಶೂನ್ಯ.
ಅಂದರೆ ಭೂಮಿಗೆ ಗುರುತ್ವಾಕರ್ಷಣಾ ಶಕ್ತಿ ಹೇಗೋ, ಹಾಗೇ ನಮ್ಮನ್ನು ಭೂಮಿಗೆ ಹಿಡಿದಿಟ್ಟಿರುವ ಶಕ್ತಿ ಪ್ರೀತಿ. ಅದೇ ನನ್ನ ಕವಿತೆಗಳಲ್ಲಿ, ಭಾವಗೀತೆಗಳಲ್ಲಿ, ನನ್ನೆಲ್ಲ ಸಾಹಿತ್ಯದಲ್ಲಿ ಕಾಣುತ್ತಾ ಹೋಯಿತು.

೪. ನಿಮ್ಮ ಹಾಡುಗಳಲ್ಲಿನ ವೈವಿಧ್ಯ ಬಹಳ. 'ಗಾಂಡಲೀನ', 'ಬಾ ಮಳೆಯೇ ಬಾ', 'ಸುಬ್ಬಾಭಟ್ಟರ ಮಗಳೇ', 'ನಿಂಬೆಗಿಡ', 'ಅಮ್ಮಾ ನಿನ್ನ ಎದೆಯಾಳದಲ್ಲಿ' ಹೀಗೆ ವೈವಿಧ್ಯವಾಗಿ ಬರೆದವರು ನೀವು ಈ ವೈವಿಧ್ಯತೆ ಹೇಗೆ ಸಾಧ್ಯವಾಯಿತು?

ವೈವಿಧ್ಯತೆ ಪ್ಲಾನ್ ಮಾಡಿ ಬರುವಂತಹದ್ದಲ್ಲ. ಒಬ್ಬನ ಬದುಕಿನಲ್ಲಿ ಗಂಭೀರವಾಗಿ ಯೋಚಿಸುವ ಕ್ಷಣಗಳಿದ್ದಂತೆ, ಹಾಸ್ಯದ ಕ್ಷಣಗಳಿರುತ್ತವೆ. ಪ್ರೀತಿಯ ಕ್ಷಣಗಳಿರುತ್ತವೆ. ಮನಸ್ಥಿತಿ ಬದಲಾಗುತ್ತದೆ. ಅದಕ್ಕೆ ತಕ್ಕನಾಗಿ ವೈವಿಧ್ಯತೆ ಮೂಡಿ ಬರುತ್ತದಷ್ಟೇ.

೫. ಇಂದಿನ ಗೀತೆಗಳ ಬಗ್ಗೆ, ಬರಹಗಾರರ ಬಗ್ಗೆ...

ಇಂದು ಗೀತೆಗಳನ್ನು ರಚಿಸುವಾಗ, ಕವನಗಳನ್ನು ಬರೆಯುವಾಗ ಯಾವುದೇ ಸಂಪ್ರದಾಯಗಳಿಲ್ಲದೇ ಬರೆಯಲಿಕ್ಕಿಳಿದುಬಿಡ್ತಾರೆ. ನವ್ಯದಿಂದ ಯುವಕರು ಏನು ಕಲಿತಿದ್ದಾರೆ ಎಂದರೆ  ತೋಚಿದ ಗದ್ಯವನ್ನೇ ಹಲವು ಸಾಲುಗಳಲ್ಲು ಬರೆದು ಬಿಟ್ರೆ ಕವಿತೆಯಾಗಿಬಿಡುತ್ತದೆ ಎಂದು. ಹಾಡನ್ನು, ಗೀತೆಯನ್ನು ಬರೆಯಬೇಕಾದ್ರೆ ಛಂದಸ್ಸು ಬೇಕು. ಕಲಿಕೆ ಬೇಕು. ಬರೆಯುವುದಕ್ಕಿಂತ ಮುಂಚೆ ಕಾವ್ಯ ಸಂಪ್ರದಾಯಗಳ ತಿಳುವಳಿಕೆ ಇರಬೇಕು. ಹೊಸತಾಗಿ ಬರೆಯಬೇಕಿದ್ದರೂ ನಮ್ಮ ಸಂಪ್ರದಾಯದ ತಿಳುವಳಿಕೆ ನಮಗಿರಬೇಕಲ್ಲವೇ?

                                         ---------------------------------------------------------------
 ಅನ್ನಿಸಿದ್ದು: 
ಹೀಗೆ ಈ ಒಂದು ಸಂದರ್ಶನ ನಮ್ಮ ವಾರ್ಷಿಕ ಸಂಚಿಕೆಯಲ್ಲಿ ಹಾರ್ಡ್ ಬೈಂಡ್ ನೊಂದಿಗೆ ಸುಂದರವಾಗಿ ಮೂಡಿ ಬಂತು (ಇದನ್ನು ಮತ್ತೆ ತಿಲಕ್ ಹಾಗೂ ಉಳಿದ ಸಂಪಾದಕ ಮಿತ್ರರು ಸಾಧ್ಯವಾಗಿಸಿದ್ದು). ನಮಗೆ ಒಂದಿಷ್ಟು ಹೆಮ್ಮೆ. ಸಂಚಿಕೆಗಾಗಿ ಶ್ರಮಿಸಿದ ಸಂಪಾದಕರಲ್ಲೆಲ್ಲ ಖುಶಿ. ಕೊನೆಗೆ ನಮಗೆ ಸಿಕ್ಕಿದ್ದೇನು ಎನ್ನುತ್ತೀರಾ? ಸಂದರ್ಶನ ರೂಪಿಸಿದ್ದು ನಿಮಗೇ ಈಗ ತಿಳಿಯುವಂತೆ ನಾನಲ್ಲ. ಐ.ಕೆ. sir ಮತ್ತು ಬಿ.ಆರ್.ಎಲ್, ಆದರೆ ನನಗೆ ಸಿಕ್ಕಿದ್ದು ಇಬ್ಬರಿಂದಲೂ ಒಂದಿಷ್ಟು ಕಲಿಕೆ ಹಾಗೂ ಮತ್ತೆ ಮಕ್ಕಳಂತೆ ಕೂತು ಕೇಳುವ ಅವಕಾಶ. ಹಾಗೂ ನನ್ನಿಂದ ಹಾಸ್ಟೆಲ್ಲಿನ ಮ್ಯಾಗ್ಝೀನಿಗೆ ಅಷ್ಟಾದರೂ ಮಾಡಲಾಯಿತಲ್ಲ ಎಂಬ ಸಮಾಧಾನ. ನನಗೆಷ್ಟು ಗೊತ್ತಿಲ್ಲ ಎನ್ನುವುದೂ ಗೊತ್ತಾಯಿತು, ಆದರೆ ಅದು ನಿತ್ಯ ನಡೆಯುತ್ತಿದೆ, ಆ ಪ್ರಶ್ನೆ ಬೇರೆ! ಈಗ ಬಿ.ಆರ್.ಎಲ್ ಗಂಭೀರ ಕಾವ್ಯದ ಸಂಕಲನಗಳನ್ನೂ ಓದಬೇಕೆಂದಿದ್ದೇನೆ. ಹಾಗೇ ಅಡಿಗರನ್ನು ಸಹ. ಕಾವ್ಯ ಪರಂಪರೆಯ ಅರಿವು ಬೇಕಲ್ಲವೇ? ಅದೇ ಈಗ ಮುಂದಿನ ಪಯಣ.
 

Saturday, November 5, 2011

ಭೂಮಿಗೆ ಭಾರ!?!

ಇಟ್ಟ ಹೆಜ್ಜೆಗಳೆಲ್ಲ
ಅನಾಥ! ಅರ್ಥಗಳೆಲ್ಲಿ?
ತೋರಣ ಕಟ್ಟಿ ಉಳಿದ ಹೂವುಗಳು,
ಯಾರೂ ಮೂಸದೆಯೇ ಬಾಡಿ ಹೋದವು!
ಯಾರೂ ಕೇಳದ ಮೌನ, ದೂರಹೊರಟಿತು!
ಪುಟ್ಟ ಮಗುವೊಂದರ ಮುಖದಲ್ಲಿ
ತುಂಬು ನಗೆ!
ವ್ಯಕ್ತ, ಅವ್ಯಕ್ತಗಳು
ಪದಗಳಾಗದೇ ಹಾರುತ್ತಿವೆ,
ಕಾಲದ ಹಕ್ಕಿಯ ಬೆನ್ನೇರಿ!
ಖಾಲಿ ಕೈಯಲ್ಲಿ ಹಿಡಿದಿಟ್ಟ ನಿರೀಕ್ಷೆ,
ಸುಪ್ತ!
ಮುಂದಡಿ ಇಟ್ಟರೆ
ಇಟ್ಟ ಹೆಜ್ಜೆಗಳೆಲ್ಲ ...!
ನಿಮ್ಮ ಕಣ್ಣುಗಳಲ್ಲಿನ ಭೂಮಿಗೆ
ಮತ್ತಷ್ಟು ಭಾರ!
ಹಾ! ಮೊಗೆದಷ್ಟು ಬದುಕು!