Pages

Sunday, October 13, 2013

ರಾಜಾ ಬಜಾರಿನ ಬೀದಿಗಳು



ತೂರಿ ತೂರಿ ಇಟ್ಟಿರುವ
ಕಟ್ಟಿರುವ ಕಟ್ಟಡಗಳೆಷ್ಟೋ
ಅಷ್ಟೇ ಬೆಳಕುಗಳು,
ನೆರಳುಗಳು. ಕೆಳಗೆ
ಕುರ್ಚಿ, ಹಾಸಿಗೆಗಳ ಸೊಕ್ಕು ಕಾಣದ
ರಸ್ತೆಯಂಚಿನಲ್ಲಿ ಸಾಲು ಕುಳಿತ ಜೀವಗಳ
ಉಸಿರಾಟಗಳ ಲಯವೋ ಲಯ!
ಈ ತಾಳಗಳು ಏಕತಾನವಾಗದಂತೆ
ಆಗಾಗ ಬಿಸಿಲು ಶೆಖೆಗಳು ಉಸಿರು ಕಟ್ಟಿಸುತ್ತವೆ
ಪಂಚಭೂತಗಳೂ ಭೂತಸದೃಶವಾಗಿ
ಬಡಿಸುತ್ತವೆ ಎದೆಗಳನು ಡವಡವಡವ
ಓಡುತ್ತಿರುವ ಕಾರುಗಳಲ್ಲಿಯೋ
ಬೊಬ್ಬಿಡುವ ರಾಗ ತಾಳಗಳು
ಉದ್ರೇಕದಲಿ ಎದೆಗಳನು ಕುಣಿಸುತ್ತಿವೆ

ಕೆಲವೇ ಮೀಟರುಗಳಾಚೆ
ಬೋಸ್ ಬರೆಸಿದ್ದಾರೆ
"ಇದು ಕಟ್ಟಡವಲ್ಲ, ದೇಗುಲ"
ಐಡಿ ಪತ್ರಗಳ ತೋರಿ
ಬೋಸರ ಅಪ್ರತಿಮ ಉಪಕರಣಗಳೆಡೆ
ಇಣುಕಿ, ದಾಟಿ
ಅರಿಸ್ಟಾಟಲನೆಡೆ ಒಮ್ಮೆ ನಕ್ಕು
ಅವನದ್ದೇ ಭಾಷೆಯಲ್ಲಿ
ಬರೆಯ ಹೊರಟಿದ್ದೇನೆ
ನಿಜವಾದ ಸತ್ಯಗಳ
ದೇಗುಲದ ಆಚೆಗೆ,
ಕಾಲಿಡದ, ಕಣ್ಕಣ್ಣು ಬಿಡುವ
ಇವೇ ಹಲವು ಜೀವಗಳ
ತಣ್ಣನೆಯ ನಿಟ್ಟುಸಿರು!


Saturday, October 12, 2013

ನನಗೊಂದು ಕನಸಿದೆ – ಮಾರ್ಟಿನ್ ಲೂಥರ್ ಕಿಂಗ್ ಭಾಷಣ, ೨೮ ಆಗಸ್ಟ್ ೧೯೬೩




ಇದು ಮಾರ್ಟಿನ್ ಲೂಥರ್ ಕಿಂಗ್ ೧೯೬೩ರಲ್ಲಿ ಮಾಡಿದ ಐತಿಹಾಸಿಕ ಭಾಷಣ. ಈ ಭಾಷಣಕ್ಕೆ ಐವತ್ತು ವರುಷಗಳಾಗಿವೆ. ನಿರಂತರದ ಪ್ರಸಾದ್ ಕುಂದೂರು ಅವರು ಇದೊಂದು ಭಾಷಣವಲ್ಲ, ಚೇತನ ಎನ್ನುತ್ತಿದ್ದರು.ನನಗೆ ತಿಳಿದಂತೆ ಅನುವಾದಿಸಿದ್ದೇನೆ. ತಪ್ಪುಗಳಿಗೆ ಕ್ಷಮೆ ಇರಲಿ. ಇದು ನಿಮ್ಮ ಮನಸ್ಸುಗಳನ್ನೂ ತೇವವಾಗೀಸಿತೆಂದು ನಿಮ್ಮ ಮುಂದಿಡುತ್ತಿದ್ದೇನೆ.
---

ಇಂದಿಗೆ ಸುಮಾರು ನೂರು ವರುಷಗಳ ಹಿಂದೆ, ಯಾರ ಮಹಾನೆರಳಿನಲ್ಲಿ ನಾವೆಲ್ಲ ಸಾಂಕೇತಿಕವಾಗಿ ನಿಂತಿದ್ದೇವೆಯೋ ಅಂತಹ ಒಬ್ಬ ಮಹಾನ್ ಅಮೆರಿಕನ್ ‘ವಿಮೋಚನಾ ಘೋಷಣೆ’ಗೆ ಸಹಿ ಹಾಕಿದರು. ಈ ಅಪೂರ್ವವಾದ ಶಾಸನವು ಅನ್ಯಾಯದ  ಬೆಂಕಿಯಲ್ಲಿ ಉರಿಯುತ್ತಿದ್ದ ಎಷ್ಟೋ ನೀಗ್ರೋಗಳಿಗೆ ದಾರಿದೀಪವಾಯಿತು. ಅವರ ಬಂಧನದ ದೀರ್ಘ ರಾತ್ರಿಯನ್ನು ಕೊನೆಯಾಗಿಸುವ ಉಲ್ಲಸಿತ ಬೆಳಗಾಯಿತು.

ಆದರೆ ಒಂದು ನೂರು ವರುಷಗಳ ನಂತರ ಇಂದಿಗೂ ನೀಗ್ರೋ ಸ್ವತಂತ್ರನಲ್ಲ. ಒಂದು ನೂರು ವರುಷಗಳ ನಂತರ, ಇಂದಿಗೂ ನೀಗ್ರೋ ಬೇರ್ಪಡಿಸುವಿಕೆಯ, ತಾರತಮ್ಯದ ಸರಪಣಿಗಳಿಂದ ದುರ್ಬಲಗೊಳ್ಳುತ್ತಿದ್ದಾನೆ. ಒಂದು ನೂರು ವರುಷಗಳ ನಂತರವೂ, ನೀಗ್ರೋ ಲೌಕಿಕ ಸಮೃದ್ಧಿಯ ಸಾಗರದ ನಡುವೆ, ಬಡತನದ ಪುಟ್ಟ ದ್ವೀಪದಲ್ಲಿ ಬದುಕತ್ತಲೇ ಇದ್ದಾನೆ. ಒಂದು ನೂರು ವರುಷಗಳ ನಂತರ, ಇಂದಿಗೂ ನೀಗ್ರೋ ಅಮೆರಿಕಾದ ಸಮಾಜದ ಮೂಲೆಗಳಲ್ಲಿ ನಿತ್ರಾಣನಾಗಿ ನಿಂತಿದ್ದಾನೆ ಹಾಗೂ ತನ್ನದೇ ನೆಲದಲ್ಲಿ ಗಡೀಪಾರಾದವರಂತಾಗಿದ್ದಾನೆ. ಅದಕ್ಕಾಗಿಯೇ ನಾವಿಂದು ಈ ಶೋಚನೀಯ ಪರಿಸ್ಥಿತಿಯನ್ನು ನಾಟಕೀಯವಾಗಿಸಲು ಇಲ್ಲಿ ನೆರೆದಿದ್ದೇವೆ.

ಒಂದು ರೀತಿಯಲ್ಲಿ ನಾವಿಂದು ನಮ್ಮ ದೇಶದ ರಾಜಧಾನಿಗೆ ಒಂದು ಚೆಕ್ ಅನ್ನು ನಗದಾಗಿಸಲು ಬಂದಿದ್ದೇವೆ. ಈ ದೇಶದ ಶಿಲ್ಪಿಗಳು  ನಮ್ಮ ಸಂವಿಧಾನದ ಹಾಗೂ ‘ಡಿಕ್ಲೆರೇಷನ್ ಆಫ್ ಇಂಡಿಪೆಂಡೆನ್ಸ್’ ನ ಅದ್ಭುತ ಸಾಲುಗಳನ್ನು ಬರೆದಾಗ ಪ್ರತಿಯೊಬ್ಬ ಅಮೆರಿಕನ್ನನಿಗೂ ಸಲ್ಲುವಂತಹ ಒಂದು ವಾಗ್ದಾನದ ಪತ್ರಕ್ಕೆ ಸಹಿ ಹಾಕಿದರು. ಈ ಪತ್ರ ಪ್ರತಿಯೊಬ್ಬ ಮನುಷ್ಯನಿಗೂ, ಹೌದು, ಕರಿಯ ಹಾಗೂ ಬಿಳಿಯ ಮನುಷ್ಯರಿಬ್ಬರಿಗೂ, ಜೀವನದ “ನಿರಾಕರಿಸಲಾಗದ ಹಕ್ಕುಗಳಾದ – ಜೀವಿಸುವ ಹಕ್ಕು, ಸ್ವಾತಂತ್ರ್ಯದ ಹಕ್ಕು ಮತ್ತು ಸಂತಸದೆಡೆಗೆ ನಡೆಯುವ ಅವಕಾಶ” ಕೊಡುವ ಮಾತು ಕೊಟ್ಟಿತ್ತು, ದೇಶದ ಬಣ್ಣವುಳ್ಳ ಜನಾಂಗವನ್ನು ಗಮನಿಸಿದರೆ, ಈ ವಾಗ್ದಾನವನ್ನು ಅಮೆರಿಕಾ ಕಾಯ್ದುಕೊಳ್ಳಲಿಲ್ಲವೆಂಬುದು ಸ್ಪಷ್ಟವಾಗಿದೆ. ಈ ಪವಿತ್ರ ಕಟ್ಟುಪಾಡಿಗೆ ಒಳಗೊಳ್ಳುವ ಬದಲಾಗಿ ಅಮೆರಿಕಾ ನೀಗ್ರೋ ಜನಕ್ಕೆ ಕೆಟ್ಟ ಚೆಕ್ ಒಂದನ್ನು ನೀಡಿದೆ, “ಸಾಕಷ್ಟು ಮೊತ್ತವಿಲ್ಲ” ಎಂದು ಮರಳಿಬರುವಂತಹ ಚೆಕ್ಕಿದು.

ಆದರೆ ನ್ಯಾಯದ ಬ್ಯಾಂಕ್ ದಿವಾಳಿಯೆದ್ದಿದೆ ಎಂದು ನಂಬಲು ನಾವು ಸಿದ್ಧರಿಲ್ಲ. ಈ ದೇಶದಲ್ಲಿನ ಅವಕಾಶಗಳ ಅದಮ್ಯ ಖಜಾನೆಯಲ್ಲಿ “ಸಾಕಷ್ಟು ಮೊತ್ತವಿಲ್ಲ” ಎಂದು ನಂಬಲು ನಾವು ಸಿದ್ಧರಿಲ್ಲ. ಹಾಗೂ ಇದಕ್ಕಾಗಿಯೇ ನಾವಿಂದು ಈ ಚೆಕ್ ಅನ್ನು ನಗದಾಗಿಸಲು ಬಂದಿದ್ದೇವೆ. ನಮ್ಮ ಬೇಡಿಕೆಗಳಿಗೆ ಪ್ರತಿಯಾಗಿ ಸ್ವಾತಂತ್ರ್ಯದ ಸಂಪತ್ತನ್ನು ಮತ್ತು ನ್ಯಾಯದ ರಕ್ಷಣೆಯನ್ನು ನೀಡುವ ಚೆಕ್ ಅನ್ನು ನಗದಾಗಿಸಲು ಬಂದಿದ್ದೇವೆ.

ಇಂದಿನ ಅದಮ್ಯ ತುರ್ತನ್ನು ನೆನಪಿಸಲೆಂದೇ ನಾವಿಂದು ಈ ಪವಿತ್ರ ಸ್ಥಳದಲ್ಲಿ ನೆರೆದಿದ್ದೇವೆ. ತಣಿಯುವ ಅಥವಾ “ಕ್ರಮೇಣವಾಗಿ” ಎಂಬ ಔಷಧಿಗಳಿಂದ ಸಮಾಧಾನಗೊಳ್ಳುವ ಕಾಲ ಇದಲ್ಲ. ಪ್ರಜಾಪ್ರಭುತ್ವದ ವಾಗ್ದಾನಗಳನ್ನು ನಿಜವಾಗಿಸಲು ಇಂದೇ ಸರಿಯಾದ ಕಾಲ. ಬೇರ್ಪಡಿಸುವಿಕೆಯ ಕರಾಳ ಕಂದಕಗಳಿಂದ ಎದ್ದು ಜನಾಂಗೀಯ ನ್ಯಾಯದ ಹೆದ್ದಾರಿಯಲ್ಲಿ ನಡೆಯಲು ಇಂದೇ ಸರಿಯಾದ ಕಾಲ. ಜನಾಂಗೀಯ ಭೇದದ ಹೂಳಿನಿಂದ ದೇಶವನ್ನು ಮೇಲೆತ್ತಿ ಭ್ರಾತೃತ್ವದ ಭದ್ರ ಬುನಾದಿಯ ಮೇಲೆ ದೇಶವನ್ನಿರಿಸಲು ಇಂದೇ ಸರಿಯಾದ ಕಾಲ. ಭಗವಂತನ ಎಲ್ಲ ಮಕ್ಕಳಿಗೂ ನ್ಯಾಯವನ್ನು ನಿಜವಾಗಿಸಲು ಇಂದೇ ಸರಿಯಾದ ಕಾಲ.

ಇವತ್ತಿನ ತುರ್ತನ್ನು ಗಮನಿಸದೇ ಹೋದರೆ ಇದು ದೇಶಕ್ಕೆ ಮುಳುವಾದೀತು. ಧಗಧಗಿಸುವ ಬೇಗೆಯ ನೀಗ್ರೋಗಳ ಬೇಸಿಗೆ ಸ್ವಾತಂತ್ರ್ಯ ಮತ್ತು ಸಮಾನತೆಯ ಉಲ್ಲಸಿತ ಶರದ್ ಋತುವಿನಿಂದಷ್ಟೇ ಮಾಯವಾದೀತು. ೧೯೬೩ ಕೊನೆಯಲ್ಲ, ಬದಲಾಗಿ ಪ್ರಾರಂಭ. ಹಬೆಯನ್ನೂದುತ್ತಿದ್ದ ನೀಗ್ರೋಗಳು ಇಂದು ಅದರ ಹೊರತಾಗಿದ್ದು ಸಂತೋಷಪಡಬೇಕೆಂದು ಭಾವಿಸುವವರು, ದೇಶ ಹೀಗೆಯೇ ಮುಂದುವರೆದರೆ, ಬಡಿದೆಬ್ಬಿಸಲ್ಪಡುತ್ತಾರೆ. ನೀಗ್ರೋಗಳಿಗೆ ಜನ್ಮದತ್ತ ಹಕ್ಕುಗಳು ನೀಡುವವರೆಗೆ,  ಅಮೆರಿಕಾದಲ್ಲಿ ಶಾಂತಿಯಾಗಲೀ, ನೆಮ್ಮದಿಯಾಗಲೀ ನೆಲೆನಿಲ್ಲದು. ಕ್ರಾಂತಿಯ ಚಂಡಮಾರುತವು ನ್ಯಾಯದ ಬೆಳಕು ಮೂಡುವವರೆಗೆ ದೇಶದ ಬುನಾದಿಯನ್ನು ಅಲ್ಲಾಡಿಸುತ್ತಲೇ ಇರುವುದು.

ಇನ್ನು ನ್ಯಾಯದತ್ತ ಮುಟ್ಟಿಸುವ ಹೊಸ್ತಿಲ ಮೇಲೆ ನಿಂತಿರುವ ನನ್ನ ಜನರ ಬಳಿ ನಾನು ಹೇಳುವುದೊಂದಿದೆ: ನಮ್ಮ ನ್ಯಾಯಯುತವಾದ ಸ್ಥಾನವನ್ನು ಪಡೆಯುವ ಈ ಪ್ರಕ್ರಿಯೆಯಲ್ಲಿ ನಾವು ಕೆಡುಕನ್ನೆಸಗಿ ತಪ್ಪಿತಸ್ಥರಾಗಬಾರದು. ಕಹಿ ಮತ್ತು ದ್ವೇಷವನ್ನು ಕುಡಿದು ನಮ್ಮ ಸ್ವಾತಂತ್ರ್ಯದ ದಾಹವನ್ನು ತಣಿಸಲೆತ್ನಿಸದಿರೋಣ. ನಮ್ಮ ಹೋರಾಟವನ್ನು ಶಿಸ್ತಿನ ಹಾಗೂ ಘನತೆಯ ಎತ್ತರದಲ್ಲಿರಿಸೋಣ. ನಮ್ಮ ಸೃಜನಾತ್ಮಕ ಹೋರಾಟವನ್ನು ಭೌತಿಕ ಹಿಂಸೆಯ ಮಟ್ಟಕ್ಕಿಳಿಯಲು ನಾವು ಬಿಡಬಾರದು. ಭೌತಿಕ ಶಕ್ತಿಯು ಆತ್ಮದ ಶಕ್ತಿಯೊಡನೆ ಬೆರೆಯುವ ಮಹಾ ಎತ್ತರಗಳಿಗೆ ನಾವೀಗ ಏರಬೇಕು.
ನೀಗ್ರೋ ಜನಾಂಗವನ್ನು ಸುತ್ತುವರೆದಿರುವಂತಹ ಈ ತೀವ್ರಗಾಮೀ ಪ್ರವೃತ್ತಿಯಿಂದ ಎಲ್ಲ ಬಿಳಿಯರೊಡನೆಯೂ ನಮ್ಮ ನಂಬಿಕೆ ಕಳೆದುಹೋದಂತಾಗಬಾರದು. ಏಕೆಂದರೆ, ಇಂದು ಇಲ್ಲಿ ಅವರು ಸೇರಿರುವುದರಿಂದಲೇ ಗೋಚರವಾಗುವಂತೆ, ನಮ್ಮ ಹಲವಾರು ಬಿಳಿಯ ಗೆಳೆಯರಿಗೆ ಅವರ ಹಾಗೂ ನಮ್ಮ ಗುರಿಗಳು ಪರಸ್ಪರ ಹೆಣೆದುಕೊಂಡಿರುವುದರ ಅರಿವಾಗಿದೆ. ಹಾಗೂ ಅವರಿಗೆ ಅವರ ಸ್ವಾತಂತ್ರ್ಯ ನಮ್ಮ ಸ್ವಾತಂತ್ರ್ಯದೊಡನೆ ಸೂಕ್ಷ್ಮವಾಗಿ ತಳುಕು ಹಾಕಿಕೊಂಡಿರುವುದರ ಅರಿವಾಗಿದೆ.

ನಾವು ಒಬ್ಬರೇ ನಡೆಯಲಾರೆವು.

ಹಾಗೂ ನಾವು ನಡೆದಂತೆಲ್ಲಾ, ನಾವೂ ಎಂದಿಗೂ ಮುಂದೆ ಮುಂದೆ ಸಾಗುತ್ತೇವೆ ಎಂಬ ಪ್ರತಿಜ್ಞೆಯನ್ನು ಕೈಗೊಳ್ಳಬೇಕಾಗಿದೆ.

ನಾವು ಹಿಂದೆ ತಿರುಗಲಾರೆವು. 

ನಾಗರೀಕ ಹಕ್ಕುಗಳಿಗಾಗಿ ನಿರತವಾಗಿರುವವರನ್ನು ಕೆಲವರು ಕೇಳುತ್ತಾರೆ – “ನಿಮಗೆಂದು ತೃಪ್ತಿ?” ಬಣ್ಣಿಸಲೂ ಆಗದ ಹೀನ ಪೋಲೀಸ್ ಕ್ರೌರ್ಯಕ್ಕೆ ನೀಗ್ರೋ ಬಲಿಯಾಗುತ್ತಿರುವವರೆಗೆ ನಾವೆಂದೂ ತೃಪ್ತಿಯನ್ನು ಕಾಣೆವು. ಪ್ರಯಾಣದ ದಣಿವಿನಲ್ಲಿ ಭಾರವಾದ ನಮ ದೇಹಗಳಿಗೆ ಹೈವೇಯ ಮೋಟೆಲ್ ಗಳಲ್ಲಿ, ನಗರದ ಹೋಟೆಲ್ ಗಳಲ್ಲಿ ವಸತಿ ದೊರೆಯುವವರೆಗೆ ನಾವು ತೃಪ್ತಿಯನ್ನು ಕಾಣೆವು.  ನೀಗ್ರೋವೊಬ್ಬನ ಚಲನೆ ಒಂದು ಸಣ್ಣ ಕೇರಿಯಿಂದ ದೊಡ್ಡ ಕೇರಿಗೆ ಆದದ್ದಕ್ಕಷ್ಟೇ ನಾವು ತೃಪ್ತಿಪಡಲಾರೆವು. ನಮ್ಮ ಮಕ್ಕಳ ಅಸ್ತಿತ್ವವನ್ನೇ ಇಲ್ಲವಾಗಿಸುವಂತಹ, ಅವರ ಘನತೆಯನ್ನೇ ಕಿತ್ತೊಗೆಯುವಂತಹ “ಬಿಳಿಯರಿಗೆ ಮಾತ್ರ” ಅನ್ನುವ ನಾಮಫಲಕಗಳು ಕಾಣಿಸುತ್ತಿರುವ ತನಕ ನಮಗೆ ತೃಪ್ತಿಯಿರದು. ಮಿಸಿಸಿಪಿಯ ನೀಗ್ರೋ ಮತ ಚಲಾಯಿಸಲಾಗದಂತಹ ಹಾಗೂ ನ್ಯೂಯಾರ್ಕಿನ ನೀಗ್ರೋಗೆ ಮತ ಚಲಾಯಿಸಲು ಏನೂ ಕಾರಣವಿಲ್ಲದಂತಹ ಸ್ಥಿತಿಯಿರುವವರೆಗೆ ನಮಗೆ ತೃಪ್ತಿಯಿರದು. “ನ್ಯಾಯ ನೀರಿನಂತೆ, ಧರ್ಮಶೀಲತೆ ಪ್ರಬಲ ತೊರೆಯಂತೆ ಹರಿಯುವ ತನಕ” ನಮಗೆ ನೆಮ್ಮದಿಯಿರದು.

ನಾನು ನಿಮಗಿಂದು ಹೇಳುತ್ತಿದ್ದೇನೆ – ಗೆಳೆಯರೇ, ನಿರಾಶೆಯ ಕಂದಕದೊಳಗೆ ತೇಲಾಡುವುದು ಬೇಡ.

ನನಗೆ ಈಗಲೂ ಒಂದು ಕನಸಿದೆ. ಈ ಕನಸು ಅಮೆರಿಕನ್ ಕನಸಿನಲ್ಲೇ ಆಳವಾಗಿ ಬೇರುಬಿಟ್ಟಿದೆ.
ನನಗೊಂದು ಕನಸಿದೆ. ಈ ದೇಶ ಒಮ್ಮೆ ಎದ್ದೇಳುತ್ತದೆ ಹಾಗೂ ಇಲ್ಲಿಯ ಧರ್ಮದ ಅರ್ಥವನ್ನು ನಿಜವಾಗಲೂ ಬದುಕಿ ತೋರಿಸುತ್ತದೆ “ನಾವು ಈ ಸತ್ಯಗಳು ಸ್ವಯಂಗೋಚರವೆಂದು ಭಾವಿಸುತ್ತೇವೆ – ಪ್ರತಿಯೊಬ್ಬ ಮನುಷ್ಯನೂ ಸಮಾನವಾಗಿ ಸೃಷ್ಟಿಸಲ್ಪಟ್ಟಿದ್ದಾನೆ.”

ನನಗೊಂದು ಕನಸಿದೆ. ಒಂದು ದಿನ ಜಾರ್ಜಿಯಾದ ಕೆಂಪು ಬೆಟ್ಟಗಳ ಮೇಲೆ ಗುಲಾಮನಾಗಿದ್ದವನ ಮಗನೊಬ್ಬ ಹಾಗೂ ಗುಲಾಮನ ಒಡೆಯನಾಗಿದ್ದವನ ಮಗನೊಬ್ಬ ಒಟ್ಟಿಗೆ ಭ್ರಾತೃತ್ವದ ಮೇಜಿನಲ್ಲಿ ಸಮಾನವಾಗಿ ಕೂರಬಲ್ಲರೆಂದು.

ನನಗೊಂದು ಕನಸಿದೆ. ಮಿಸಿಸಿಪಿಯಂತಹ ಅನ್ಯಾಯದ ಬೇಗೆಯಲ್ಲಿ ಬೇಯುವ ರಾಜ್ಯವು ಕೂಡಾ ಸ್ವಾತಂತ್ರ್ಯ ಮತ್ತು ನ್ಯಾಯದ ಓಯಸಿಸ್ ಆಗುತ್ತದೆಂದು.

ನನಗೊಂದು ಕನಸಿದೆ. ನನ್ನ ನಾಲ್ಕು ಪುಟ್ಟ ಮಕ್ಕಳು ಅವರ ಚರ್ಮದ ಬಣ್ಣದಿಂದ ಅಳೆಯಲ್ಪಡದೇ ಅವರ ವ್ಯಕ್ತಿತ್ವದ ಸತ್ವದಿಂದ ಅಳೆಯುವ ದೇಶದಲ್ಲಿ ಬದುಕುತ್ತಾರೆಂದು.

ನನಗೊಂದು ಕನಸಿದೆ. ಒಂದು ದಿನ. ಪುಟ್ಟ ಕರಿಯ ಹುಡುಗರು ಮತ್ತು ಹುಡುಗಿಯರು, ಪುಟ್ಟ ಬಿಳಿಯ ಹುಡುಗರು ಮತ್ತು ಹುಡುಗಿಯರೊಂದಿಗೆ ಅಣ್ಣ ತಮ್ಮಂದಿರಂತೆ ಕೈ ಕೈ ಹಿಡಿದು ನಡೆಯಬಲ್ಲವರಾಗುತ್ತಾರೆಂದು.

ಇಂದು ನನಗೊಂದು ಕನಸಿದೆ.

ಒಂದು ದಿನ ಎಲ್ಲ ಕಂದಕಗಳೂ ಮೇಲೇರುತ್ತವೆ ಹಾಗೂ ಎಲ್ಲ ಪರ್ವತಗಳೂ ತಗ್ಗಾಗುತ್ತವೆ, ಒರಟು ಜಾಗಗಳನ್ನು ಸಮತಟ್ಟಾಗಿಸಲಾಗುತ್ತದೆ ಹಾಗೂ ವಕ್ರವಾದ ಪ್ರದೇಶಗಳನ್ನು ನೇರವಾಗಿಸಲಾಗುತ್ತದೆ: “ಹಾಗೂ ಭಗವಂತನ ಮಹಿಮೆ ಗೋಚರವಾಗುತ್ತದೆ ಮತ್ತು ಪ್ರತಿಯೊಂದು ಜೀವವೂ ಅದನ್ನು ಒಟ್ಟಾಗಿ ನೋಡೂತ್ತದೆ”

ಈ ನಂಬಿಕೆಯಿಂದ, ನಾವು ನಿರಾಶೆಯ ಶಿಖರಗಳಿಂದ ಭರವಸೆಯ ಕಲ್ಲುಗಳನ್ನು ಬೇರ್ಪಡಿಸಲು ಸಾಧ್ಯ. ಈ ನಂಬಿಕೆಯಿಂದ ನಾವು ಒಟ್ಟಿಗೆ ಕೆಲಸ ಮಾಡಬಲ್ಲೆವು, ಒಟ್ಟಿಗೆ ಪ್ರಾರ್ಥಿಸಬಲ್ಲೆವು, ಒಟ್ಟಿಗೆ ಹೋರಾಡಬಲ್ಲೆವು, ಒಟ್ಟಿಗೆ ಜೈಲು ಸೇರಬಲ್ಲೆವು, ಸ್ವಾತಂತ್ರ್ಯಕ್ಕಾಗಿ ಒಟ್ಟಿಗೆ ಎದ್ದು ನಿಲ್ಲಬಲ್ಲೆವು – ನಾವು ಒಂದು ದಿನ ಸ್ವತಂತ್ರರಾಗೇ ಆಗುತ್ತೇವೆಂಬ ನಂಬಿಕೆಯಿಂದ.

ಇದನ್ನೂ ನೋಡಿ:
ಆಂಗ್ಲ ಪ್ರತಿಯ ಲಿಂಕು: http://www.americanrhetoric.com/speeches/mlkihaveadream.htm
ಇನ್ನೊಂದು ಅನುವಾದ: http://sampada.net/article/6024