Pages

Thursday, July 18, 2013

ಟ್ರೈನಿನ ಕನಸು

ಎಷ್ಟೋ ದಿನಗಳಂತೆ ಭಾಸವಾದ
ಮುವ್ವತ್ತು ಗಂಟೆಗಳನ್ನೂ ದಾಟಿ
ರೈಲು ಚಲಿಸುತ್ತಲೇ ಇದೆ
ಮುವ್ವತ್ತು ಗಂಟೆಗಳಲ್ಲಿ ಮುವ್ವತ್ತು ಕಡೆ
ನಿಂತು, ಟಿಕೆಟಿದ್ದವರ, ಇಲ್ಲದವರ,
ಕಾಯ್ದಿರಿಸಿದ ಪಟ್ಟಿಯಲ್ಲಿ ಕಳೆದುಹೋಗಿ
ಅಲವತ್ತವರೆನ್ನಲ್ಲ
ಕರೆದೊಯ್ಯುವ ಟ್ರೈನು
ಆಧುನಿಕ ಚಿಂತನೆಗಳನ್ನು ಅರಗಿಸಿಕೊಂಡಿರಲೇ ಬೇಕು!

ಹುಟ್ಟನ್ನೂ, ಧಿರಿಸನ್ನೂ ನೋಡದೆ
ಪರಿಚಯಕ್ಕೆ ಮಾತ್ರ ಹೆಸರು ಕೇಳುತ್ತದೆ
ಒಮ್ಮೆಮ್ಮೆ ವಯಸ್ಸು ಹೇಳಿದರೆ ಕನಿಕರ ತೋರುತ್ತದೆ
ನಿಮ್ಮ ಹಮ್ಮುಗಳ ಬಿಮ್ಮುಗಳ ಪ್ರದರ್ಶನಕ್ಕೊಮ್ಮೆಮ್ಮೆ
ಜಾಗ ಬಿಟ್ಟು, ನಿಟ್ಟುಸಿರಿಟ್ಟು
ಮತ್ತೆ ಹೊಟ್ಟೆಯೊಳಗೆಳೆದುಕೊಳ್ಳುತ್ತದೆ

ತಾಯಿಯಾದರೂ ಹೊಟ್ಟೆಯೊಳಗಿರುವ
ಒಂದು ಮಗುವಿಗೆ ಹೆಚ್ಚು ಸಂತೋಷ ಪಟ್ಟಾಳು
ಟ್ರೈನು ಸದಾ ಸಮಾನ!

-----------------------

ಒಳ ಬರುವ ಮುಖಗಳಲ್ಲೆಷ್ಟು ಕಥೆಗಳು!
ಪ್ರತಿ ಮುಖದಲ್ಲೂ ಬೇರೆ ಬೇರೆಯ ಗೆರೆಗಳು
ಒಳಗೆ ಕೂತು ಕಣ್ಣುಗಳನ್ನುಬ್ಬಿಸಿಕೊಂಡೇ ನೋಡುತ್ತೇನೆ
ಪ್ಯಾಂಟುಗಳು ಪಂಚೆಗಳನ್ನು ನೆನಪಿಸಿಕೊಳ್ಳುವುದನ್ನು,
ಸೀರೆ ಸಲ್ವಾರ್‍ಗಳು ನಗುವುದನ್ನು,
ಭಾಷೆಗಳು ಭಾಷೆಗಳಾಚೆ ಬೆಳೆಯುವುದನ್ನು,
ಚಾ ಕುಡಿಯಲು ನೋಟು ತೆಗೆದರೆ
ಗಾಂಧಿ ತಾತ ಹೆಚ್ಚು ನಗುತ್ತಿದ್ದಾನೆ!

ಎದೆಗೆ ಬಿದ್ದ ಅಕ್ಷರಗಳು
ತೇವವಾಗುತ್ತವೆ ಟ್ರೈನಿನಲ್ಲಿ.
ಯಾರೋ ಯಾರಿಗೋ ತಾಯಿಯಾಗುತ್ತಾರೆ,
ತಂಗಿ, ತಮ್ಮ, ಅಣ್ಣ, ಗೆಳೆಯರಾಗುತ್ತಾರೆ
ಚುನಾವಾಣೆಯಿಲ್ಲದೆಯೂ ಜನ
"ಭಾಯಿ ಭಾಯಿ" ಎನ್ನುತ್ತಾರೆ
ಸ್ಲೀಪರ್ ಬೋಗಿಯ ಸ್ವಿಚ್ ಬೋರ್ಡಿಗೆ
ಶಪಿಸಿ ಮೊಬೈಲ್ ಮರೆಯುತ್ತಾರೆ
ಪಕ್ಕದ ಸ್ಲಮ್ಮುಗಳ ಕಸದ ರಾಶಿಯನ್ನು ನೋಡಿ
ಎಸೆಯ ಹೊರಟ ಕೆಲವು
ಕೈಗಳಾದರೂ ಹಿಂದಿರುಗುತ್ತವೆ

-------------------

ಇಷ್ಟರ ಮಧ್ಯ ಸೋಲಪುರದಲ್ಯಾರೋ ಗಡ್ಡದಾರಿ
ಹತ್ತಿ ಬೈಯತೊಡಗುತ್ತಾನೆ
ನಮ್ಮ ಹೆಂಗಸರತ್ತ ಸುಳಿಯಬೇಡಿರೆಂದು
ಸೀಟುಗಳತ್ತ ಅಟ್ಟುತ್ತಾನೆ
ಹೆಂಗಸರ ಜೊತೆಗೆ ಇನ್ನಷ್ಟು
ಗಡ್ಡಧಾರೀ ಗಂಡಸರೂ ಬಂದು
ಆರು ಸೀಟುಗಳಿಗೆ ಕಿಟಕಿಯಿಲ್ಲದಂತೆ
ಮುಖವಿಲ್ಲದಂತೆ ಪರದೆ ಕಟ್ಟುತ್ತಾರೆ
ಅವರದ್ದೇ ಧರ್ಮದ
ಸಹೃದಯಿಗಳು "ಯಾರೋ ಪುಣ್ಯವಂತರು" ಎನ್ನುತ್ತಾರೆ
ಪೇಟ ಧಾರಿಯೊಬ್ಬ ಮುಖ ಸಿಂಡರಿಸುತ್ತಾನೆ
ಮತ್ತೊಬ್ಬನ್ಯಾರೋ ಪಕ್ಕದವನ ಕಿವಿಯಲ್ಲಿ
ಗುಸುಗುಟ್ಟುತ್ತಾನೆ
ನಾಸ್ತಿಕನೊಬ್ಬ ಇವರನ್ನೆಲ್ಲ ನೋಡಿ
"ಧರ್ಮಗಳೇ ಇಷ್ಟು!" ಎನ್ನುತ್ತಾನೆ
ಇತ್ತ ಎ.ಸಿ. ಕೋಚುಗಳಲ್ಲಿ
ಇವ್ಯಾವುದರ ಪರಿವೆ ಇಲ್ಲದೇ
ಭಾರತದ ಇನ್ನೊಂದೇ ವರ್ಗದ ಜನತೆ
ಸದಾ ಪರದೆ ಹಾಕಿಕೊಂಡು ನಿದ್ದೆ ಮಾಡುತ್ತಿದೆ!

ಈ ಭಿನ್ನತೆಯ ಅಸಹನೀಯ ಉಸುರುಗಳ ತಾಳಲಾರದೇ
ಟ್ರೈನು ವೇಗ ವರ್ಧಿಸುತ್ತದೆ
ಆಸ್ತಿಕ, ನಾಸ್ತಿಕ, ಇತರೆಗಳನ್ನೆಲ್ಲ
ದಿಲ್ಲಿಯಲ್ಲಿ ಉಗುಳಿ ಹೊರಗಟ್ಟಿ ನಿಟ್ಟುಸಿರಿಡುತ್ತದೆ
ಏಕಾಂತದಲ್ಲೊಮ್ಮೆ ವಿರಮಿಸಿ
ಗಾಂಧೀ ತಾತನೊಡನೆ ಕನಸು ಕಾಣುತ್ತದೆ
ಮತ್ತೆ ಇನ್ಯಾವುದೋ ಜೀವಗಳ ಹೊತ್ತು,
ಮರಳಿ ಸಾಗುತ್ತದೆ