Pages

Tuesday, May 24, 2016

ಬುದ್ಧನ ನಗು

ಆಸೆಗಳ ತೊರೆದ ಬುದ್ಧ ದಪ್ಪಗಿದ್ದ

ಸಾವು, ಮುಪ್ಪು,
ಬದುಕಿನ ವಿಷಾದಗಳನ್ನು
ಕಂಡಿದ್ದ ಬುದ್ಧ-
ಇವನು ಅವನೇ

ಮನೆಗಳಲ್ಲಿ ನೆಲೆಯಾಗದೇ
ಅಲೆಯುತ್ತಿದ್ದವ,
ಒಂದಗಲದ ಬಟ್ಟೆಯನ್ನು ಹೇಗೋ ಸುತ್ತಿಕೊಂಡು
ಸೋಜಿಗವಾಗಿದ್ದವ
ನಗುವಿನಿಂದಲೇ ನಿರ್ವಾಣ ತಲುಪಿದ್ದನೆಂದು
ಊರಿನಲ್ಲಿ ಸುದ್ದಿಯಾದಾಗ ಯಾರೂ ನಂಬಿರಲಿಲ್ಲ

ಶಿಷ್ಯರಿರದ, ಭೋದಿಸಿರದ ಬುದ್ಧ
ಹಾರಿಹೋಗುವ ತರಗೆಲೆಗಳಲ್ಲಿ,
ಸಂಪಿಗೆ ಹೂವುಗಳಲ್ಲಿ,
ಊರೂರಿಗೆ ನಗುವನ್ನು ಪಸರಿಸಿದ್ದನೆಂದರೆ
ಇತಿಹಾಸವನ್ನೋದಿದ ನೀವು
ಒಪ್ಪಲಾರಿರಿ - ತರಗೆಲೆಗಳ
ತುಂಬೆ ನೊಣಗಳ
ಸದ್ದು ಕೇಳದಂತೆ ಕಿವುಡಾಗಿ.

ಬುದ್ಧನನ್ನು ಕಾಣಲು
ಧ್ಯಾನಿಸುವುದಲ್ಲ

ಮನಸ್ಸನ್ನು ಮರೆಯಬೇಕಿಲ್ಲ
ಸುಮ್ಮನೆ ಟೀವಿ ಆರಿಸಿ
ಫೋನ್ ಮುಚ್ಚಿಟ್ಟು
ಆರಾಮದಲ್ಲಿ ಕುಳಿತು ಆಲಿಸಿದರೆ ಸಾಕು

ಡೊಳ್ಳುಹೊಟ್ಟೆಯ ಬುದ್ಧ
ಪ್ರತ್ಯಕ್ಷನಾಗದಿದ್ದರೂ
ಪ್ರಕೃತಿಯ ಗುಂಯ್‍ಗುಡುವಿಕೆಯಲ್ಲಿ
ಬುದ್ಧನ ನಗು ಪಸರಿಸುತ್ತಿರುವುದನ್ನು-
ನೀವೇ ಕಾಣಬಹುದು


Monday, May 16, 2016

ಕ್ಲೀಷೆ

ನಮ್ಮ ಬಗ್ಗೆ ಬರೆಯುತ್ತ ಹೋದರೆ
ಕ್ಲೀಷೆಯಾಗಿಬಿಡುತ್ತದೆ:
ಎಲ್ಲವನ್ನೂ ನೋಡಿ,
ಎಲ್ಲ ಓದಿದವರಿದ್ದಾರೆ

ನಿನ್ನ ಮೌನ, ನಮ್ಮ ಮಾತು
ಒಬ್ಬರನ್ನೊಬ್ಬರು ನೆನೆದು ಹಿಗ್ಗುವುದೆಲ್ಲ
ಬರೆದು ಓದಲು ತಕ್ಕದ್ದಲ್ಲ-
ಎನ್ನುವಾಗ,

ನಾವು ಹಳೆಯ ಇಂಗ್ಲಿಷ್
ಕ್ಲಾಸಿಕ್ಕೊಂದನ್ನು ಹಿಡಿದು,
ಓದುವ, ವಿಮರ್ಶಿಸುವ,
ಒಬ್ಬರಿಗೊಬ್ಬರು ವಿವರಿಸುವ
ತಮಾಷೆ ನಡೆಸಬಹುದು