Pages

Saturday, December 17, 2011

ಸುತ್ತ ಶಾಯಿಯಿ ಗೆರೆಗಳು

ನಾನು ಹುಟ್ಟಿದಾಕ್ಷಣ ನನ್ನ
ಎತ್ತಿ ತೊಳೆದ ನರ್ಸು
ಯಾವ ಜಾತಿಯವಳಿದ್ದಳೋ?
ನಂತರ ಹುಟ್ಟಿದ್ದಿರಬೇಕು
ನನ್ನ ಜಾತಿ
ನಿಮ್ಮೆಲ್ಲ ಹೆಸರುಗಳ ಮೀರುತ್ತ
ಸೊಕ್ಕಿ ಬಂದಿತು ಹೆಸರು!

ಎದೆಯ ಬಿಗಿದಿರುವ
ಬಂಧನವಿದೆ, ಬಣ್ಣಗಳಿಲ್ಲ
ಹಲವು ವರುಷಗಳ ಹೊಲಸು!
ಎದೆಯ ಸೀಳುತ್ತಾ
ಹೃದಯದ ಮೇಲೆ
ಮೂರು ಗೆರೆಯೆಳೆಯುತ್ತಿದೆಯೇನೋ!

ಸತ್ತುಹೋದವರ ನೆರಳಲ್ಲಿ
ಕುಣಿವ ಅಕ್ಷರಗಳಿವೆ
ಪಠಿಸಿದಂತೆಲ್ಲ ಅಕ್ಷರಗಳ
ಇಂಕು ಹೊರಬಂದು
ನರ್ತಿಸಿ
ನೋಡು ನೋಡುತ್ತಲೇ
ಗೆರೆಗಳಾಗಿ ಸುತ್ತಲೂ
ಹರಿದುಬಿಟ್ಟವು!

ಚಿತ್ತುಕಲೆಗಳ ಗೆರೆಗಳು,
ಬರೆ ಬಿದ್ದ ಭಾವಗಳು!
ಅಬ್ಬ! ಸುಟ್ಟುಹೋಗಲಿ
ಈ ಜನಿವಾರ!
ನನ್ನ ನೀವೆಂದಾದರೂ
ಮನುಷ್ಯನೆಂದ ನೆನಪಿಲ್ಲ
ಕರೆಯಿರೊಮ್ಮೆ,
ನಾನು ಬ್ರಾಹ್ಮಣನಲ್ಲ!