ಕೂತೇ ಮಾತನಾಡಬೇಕು,
ಒಂದು ದೀರ್ಘ
ಉಸಿರೆಳೆದುಕೊಳ್ಳಬೇಕು,
ಹುಲ್ಲೋ ಮಣ್ಣೋ
ಸಿಗುವಂತಹ ಜಾಗದಲ್ಲಿ
ಕೈ ಊರಬೇಕು,
ಕಣ್ಹೊರಳಿಸಿ,
ಎಡ ಬಲ ತಿರುಗಿಸಿ, ಕಣ್ಮುಚ್ಚಿ,
ಕೈಯುಜ್ಜಿ, ಬಿಸಿಯಾದಂತೇ
ಕಣ್ಣಿಗಿಟ್ಟು,
ನಿಧಾನವಾಗಿ ತೆರೆಯಬೇಕು,
ಇಷ್ಟು ಸಿದ್ಧತೆ
ಬೇಕು.
--
ಬಿಡುವಿಲ್ಲದೇ
ಬೆರಳುಗಳಲ್ಲಿ
ಕುಟ್ಟುತ್ತ ಕುಟ್ಟುತ್ತ
ಕಣ್ಣುಗಳು ಕೆಂಪಾದವು,
ಕಣ್ಣುಗಳು ಕೆಂಪಾದವು,
ಕೈ ನಡುಗಿತು,
ಸೋತಿತು,
ಬೆನ್ನು ಡೊಂಕಾದರೂ
ಎದೆಗಳು ಉಬ್ಬಿಯೇ
ಇವೆ,
ಚನ್ನಕೇಶವ ಹೀಗೆ
ಒಲಿಯುವುದಿಲ್ಲ
--
--
ಪರಸ್ಪರ ಪದಗಳೂ,
ಬಣ್ಣಗಳೂ ಆಗಿದ್ದೇವೆ,
ಕೆಂಪಾದ ಕಣ್ಣುಗಳೂ,
ಉಬ್ಬಿದ ಎದೆಗಳೂ,
ನ್ಯೂರಾನುಗಳಲ್ಲಿನ
ಮಿಂಚುಗಳ ದಿಕ್ಕು ತಪ್ಪಿಸಿ
ಸಿನಾಸ್ತೇಶಿಯಾ
ಆಗಿಸಿವೆ,
ಇದರಲ್ಲಿ ಮಾತುಗಳು
ಬಣ್ಣಗಳಾಗಿವೆ,
ನೀವು ನಾನು ಪದಗಳಾಗಿ,
ಡಿಕ್ಷಿನರಿ ಸೇರಲು
ಕಾದು ಕುಳಿತಿದ್ದೇವೆ
--
ಇಲ್ಲಿಂದ ಸುಮಾರು
ದೂರ ಹೋಗಬೇಕು
--
ಬೀದಿದೀಪಗಳ ಮುಸುಕಿನಲ್ಲಿ
ನಮ್ಮ ಇರುವಿನ
ಸತ್ಯಗಳು ಮಂಕಾಗಿ,
ಕ್ಷೀಣವಾಗಿ ಮಿಣುಕುತ್ತಿವೆ,
ಪದ್ಮಾಸನ ಬೇಡ,
ಹೇಗೋ ಒಟ್ಟು ಏಳಲು ಮನಸ್ಸಾಗದಂತೆ ಕೂತು
ಹೇಗೋ ಒಟ್ಟು ಏಳಲು ಮನಸ್ಸಾಗದಂತೆ ಕೂತು
ಮಾತನಾಡಬೇಕಿದೆ