Pages

Monday, August 15, 2011

ಅವಲೋಕನ


            ದೇಶಭಕ್ತಿಗೀತೆ ಹೇಳುವುದೇ ಮುಜುಗರ. ದೇಶದ ಬಗ್ಗೆ ಮಾತನಾಡುವುದು ಕೂಡಾ! ಫ್ಯಾಷನೇಬಲ್ ಆಗುವ ಸ್ಪರ್ಧೆಯಲ್ಲಿ ಎಲ್ಲರಿಗೂ ಮುಂದೋಡಬೇಕೆನ್ನುವ ಬಯಕೆ. ಕಾಣುತ್ತಿದೆಯಲ್ಲವೇ ನಿಮಗೂ? ಹಾಗೆಂದು ಹಿಂದಿನ ತಲೆಮಾರಿಗಿಂತ ನನ್ನ ತಲೆಮಾರು ಪೇಲವವಾಗಿದೆಯೆಂದೋ, ದೇಶಪ್ರೇಮ ಕಳೆದುಕೊಂಡಿದೆಯೆಂದೋ ನಾನು ಅಂದುಕೊಳ್ಳುತ್ತಿಲ್ಲ. ಹಾಗೆಲ್ಲ ಗೋಳಾಡುವುದು ಮೂರ್ಖತನ. ಆದರೆ ದೇಶಪ್ರೇಮವನ್ನು ಅಭಿವ್ಯಕ್ತಿಗೊಳಿಸುವುದರಲ್ಲಿ ಮುಜುಗರವಂತೂ ಕಾಣುತ್ತಿದೆ.
            ದೇಶ ಮತ್ತು ನಾನು ಭಿನ್ನ ಅಂಶಗಳೆಂದು ತಿಳಿಯಬಹುದೇ? ದೇಶವಿಲ್ಲದೇ ನಾನಿರಬಹುದು ಎನ್ನುವ ಸನ್ನಿವೇಶ ಜಾಗತೀಕರಣದಿಂದ ಬಂದದ್ದಿರಬಹುದು. ದಾರಿಯಲ್ಲಾಚೆ ಈಚೆ ನೋಡಿ ಬದಿಗೆ ಹೋಗಿ ಜಿಪ್ ಬಿಚ್ಚುವ ಆಸಾಮಿಗೂ, ಹಂಪಿಯಲ್ಲೆಲ್ಲ ಇಂಗ್ಲಿಷಿನಲ್ಲಿ ಪ್ರೇಮಾಕ್ಷರ ಕೆತ್ತಿಟ್ಟ ಅಮರಪ್ರೇಮಿಗೂ ದೇಶ ಬಹುದೊಡ್ಡ ವಸ್ತುವಾಗಿ ತೋರುತ್ತದೆನಿಸುತ್ತದೆ. ಪಾಂಡವರ ಹೊಳೆಯಲ್ಲಿ ಬಂದು ಎಣ್ಣೆ ಹೊಡೆಯುವವರನ್ನು, ಭರಚುಕ್ಕಿಯ ಅದ್ಭುತ ತಾಣದಲ್ಲಿರುವ ಗಲೀಜು ರಾಶಿಯನ್ನು ನೋಡೀದರೆ ತಿಳಿಯುವುದೇನು? ನಾವು ಮಾಡುವ ಕೆಲಸಗಳೆಲ್ಲ ದೇಶದೊಂದಿಗೆ ಕೂಡಿಕೊಂಡಿರುವ ಬಗ್ಗೆ ನಮಗಿರುವ ಅಜ್ಞಾನ.
            ಚಿಕ್ಕವನಾಗಿದ್ದಾಗ 'ಪಠ್ಯಪುಸ್ತಕ'ದಲ್ಲಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಓದಿದ್ದು ತೀರ ವಿರಳ. "ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟರು" ಎಂದು ಸರಳೀಕರಿಸಿಬಿಡುತ್ತೇವೆ ಹೋರಾಟದ ಮಹತ್ತನ್ನು. ಗೊತ್ತಿರುವ ಕೆಲವರಾದರೂ ಕಲ್ಪಿಸಿಕೊಳ್ಳಿ ಗಾಂಧೀಜಿ ಒಬ್ಬರೇ ಚಳುವಳಿ ನಡೆಸುತ್ತಿದ್ದ ಭಾರತವನ್ನು! ನಮಗೆ ಬೇಕಾಗಿದ್ದು ಹೀರೋಗಳಲ್ಲ. ಕೊಲ್ಕತ್ತಾ ಸ್ಲಮ್ಗಳು ಸುಸ್ಥಿತಿಗೆ ಬರಲು ಮತ್ತೆ ಥೆರೇಸಾ ಬೇಕಿಲ್ಲ. ದೇಶಕ್ಕೆ ಮತ್ತೊಬ್ಬ ಗಾಂಧಿ, ಭಗತ್, ಲಾಲಾಜಿಗಳ್ಯಾರೂ ಬೇಕಿಲ್ಲ! ದೇಶ ಗಾಂಧಿ, ಭಗತ ಸಿಂಗರಿಗಿಂತ ದೊಡ್ಡದು. ಗಾಂಧಿ ರಾಷ್ಟ್ರಪಿತರಲ್ಲ! ರಾಷ್ಟ್ರ ಗಾಂಧಿಗಿಂತ ಮೂಲಭೂತವಾದದ್ದು. ಸಾಯುವ ಹಿಂದಿನ ದಿನ "ದೇಶಕ್ಕಾಗಿ ಸಾಯುತ್ತಿದ್ದೇನೆಂಬ ಉನ್ನತ ಧ್ಯೇಯುದ ಹೊರತು ಮತ್ತೇನೂ ಬೇಕಿಲ್ಲ" ಎಂದು ತಣ್ಣನೆ ಬರೆದಿಟ್ಟಿದ್ದ ಭಗತ್ ಸಿಂಗ್. ದೇಶ ತನಗಿಂತ ಉನ್ನತ ಎಂಬುದು ಆತನಿಗೆ ಎಂದೋ ತಿಳಿದಿತ್ತು.
            ಬದಲಾಗದು ಎನಿಸುವಂತಹ ಕೆಟ್ಟ ಪರಿಸ್ಥಿತಿಗಳೂ ಕೆಲವಿವೆ ನಿಜ. ಆದರೆ ಸುಲಭಾವಾಗಿ ಬದುಲಾಗುವ ಎಷ್ಟನ್ನು ಅಳವಡಿಸಿಕೊಂಡಿದ್ದೇವೆ? ಭಾರತೀಯತೆಯನ್ನು ಉಳಿಸುವುದೆಂದರೆ ಮತ್ತೆ ವೇದಘೋಷಗಳನ್ನು ಮೊಳಗಿಸಬೇಕೆಂದಲ್ಲ. ಪ್ರಸ್ತುತ ವಿಜ್ಞಾನವನ್ನು ಪಾಶ್ಚಾತ್ಯ ವಿಜ್ಞಾನವೆಂದು ಎಸೆಯುವುದೂ ಅಲ್ಲ. 'ಪಾಶ್ಚಾತ್ಯ', 'ಭಾರತೀಯ' ವಿಜ್ಞಾನಗಳೆಂದೇನೂ ಅಸ್ತಿತ್ವದಲ್ಲಿಲ್ಲ. ಮನೆಯಲ್ಲಿ ಸಂಸ್ಕೃತಿ, ಶಾಸ್ತ್ರಗಳನ್ನು ಉಳಿಸಬೇಕೆನ್ನುವ ಭಟ್ಟರು ಶಿರಸಿ ಬಸ್ ಸ್ಟ್ಯಾಂಡಿನ ಗೋಡೆಗೆ ಕವಳ ತುಪ್ಪಿದರೆ ಯಾವ ಸಂಸ್ಕೃತಿಯೆನ್ನಬೇಕು? ಸಂಸ್ಕೃತಿ ಮಂತ್ರ, ಆಚಾರಗಳಲ್ಲಿಲ್ಲ. "ಆಚಾರ-ವಿಚಾರ' ಎನ್ನುತ್ತೇವೆ, ಎರಡೂ ಭಿನ್ನವಲ್ಲವೇ? ಆಚಾರಗಳು ಬದಲಾಗಲಿ, ಇನ್ನಷ್ಟು ಮಾನವತೆಯ ಕಡೆಗೆ. ಪ್ರಸ್ತುತವಾಗಲಿ (ಪಾಶ್ಚಾತ್ಯವಾಗಬೇಕೆನ್ನುತ್ತಿಲ್ಲ). ಆದರೆ ನಮ್ಮದೇ ಎನಿಸಿಕೊಂಡ ಒಳ್ಳೆಯ ವಿಚಾರಗಳನ್ನು ಬಿಡುವುದು ಬೇಡ. ಭಾರತೀಯತೆ ಸ್ಥಾವರದಲ್ಲಿಲ್ಲ. ಜಂಗಮದಲ್ಲಿದೆ. ಭಾರತ ಎಂದಿಗೂ ಪ್ರಸ್ತುತ, ಜೀವಂತ, ಅಂತೆಯೇ ಜಂಗಮ.
            ಒಂದಂತೂ ಅವಶ್ಯವಾಗಿ ತಿಳಿಯಬೇಕಾಗಿದೆ. ಭಾರತವನ್ನು ಉಳಿಸಲಿಕ್ಕೆ ಯಾವ ಬ್ಯಾಟ್ಮಾನ್, ಹ್ಯಾರಿ ಪಾಟರನೂ ಬೇಕಿಲ್ಲ. "Chosen one" ಎನ್ನುವುದು 'Fantasy'ಯ ವಸ್ತುವಷ್ಟೇ. ವಾಸ್ತವದ ಜಗತ್ತಿನಲ್ಲಿ ಯಾರೂ ಹುಟ್ಟಿನಿಂದ ಹೆಚ್ಚಲ್ಲ. ಎಲ್ಲರೂ ಬದಲಾವಣೆ ತರಬಲ್ಲರೂ ಕೂಡಾ. ಮೊನ್ನೆ ಸಿದ್ಧಾಪುರದಿಂದ ಶಿರಸಿಗೆ ಬರುತ್ತಿದ್ದಾಗ ಬಸ್ಸಿನಲ್ಲಿ ಪಕ್ಕ ಕುಳಿತಿದ್ದವರು ಚಾಕಲೇಟ್ ಕಾಗದ ಇತ್ಯಾದಿ ಪ್ಲಾಸ್ಟಿಕ್ ಗಳನ್ನು ಹೊರಗೆಸೆಯುವುದರಲ್ಲಿದ್ದರು. "ಒಳ್ಳೆಯ ಪ್ರದೇಶ ಸಾರ್. ಶಿರಸಿಯಲ್ಲಿ ಕಸದ ಬುಟ್ಟಿಯಲ್ಲಿ ಎಸೆಯೋಣ" ಎಂದೆ. ಒಪ್ಪಿದರು. ನಮ್ಮ ಮನೆಯಷ್ಟೇ ನಮ್ಮದೆನ್ನಿಸಿದರೆ ಸಾಲದು.
            ಪ್ರವಾಸೋದ್ಯಮ ಇಲಾಖೆಯ ಅರ್ಥಪೂರ್ಣ ಜಾಹೀರಾತುಗಳು ಬರುತ್ತವೆ. ಗೆಳೆಯರಿಗೆ ತೋರಿಸಿ. ಭಾರತ ಮತ್ತು ನಾವು ಬೇರೆಯಲ್ಲವಲ್ಲ? ಯಾವುದೋ ಹೀರೋಗೆಂದು ಕಾದು ಬೆಪ್ಪುಗಳಾಗದಿರೋಣ. ಬದಲಾಗೋಣ. ದೇಶಪ್ರೇಮ ಮುಜುಗರ ಎಂದುಕೊಂಡು ದೇಶವನ್ನು ಮುಜುಗರಕ್ಕೆ ಸಿಕ್ಕಿಸದಿರೋಣ.

                   ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. 
                                       ಶುಭವಾಗಲಿ

2 comments:

  1. ಮೊದಲನೆಯದಾಗಿ ನಿನ್ನ ಈ ಹೊಸ ಅವಲೋಕನಕ್ಕೆ ನನ್ನ ಶುಭಾಶಯಗಳು. ದೇಶದ ಬಗೆಗಿನ ಮಾತುಗಳು,ದೇಶಪ್ರೇಮ ಎಲ್ಲವೂ ಆಗಸ್ಟ್ ೧೫ ಕ್ಕೆ ಮೀಸಲಿಟ್ಟಿರುವಂತೆ ಅಭಿವ್ಯಕ್ತಗೊಳ್ಳುತ್ತದೆ. ಎಲ್ಲೆಡೆ ದೇಶದ ಬಗೆಗಿನ ಅಭಿಮಾನ ಉಕ್ಕಿ ಹರಿಯುತ್ತದೆ ನಂತರ ನಾವು ದೇಶದ ಬಗ್ಗೆ ಯೋಚಿಸುವುದು ಮುಂದಿನ ವರ್ಷವೇ. ಬೇರೆ ದೇಶಕ್ಕೆ ಹೋಗಿ ಬಂದವರು ಆ ದೇಶ ಹಾಗೆ ಹೀಗೆ ಅಲ್ಲಿ ಎಲ್ಲವನ್ನು ಸ್ವಚ್ಛವಾಗಿ ಇಡುತ್ತಾರೆ,ಅಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಿಸಾಡುವುದಿಲ್ಲ ಎಂದು ಹೊಗಳಿದ್ಧೆ ಬಂತು ಇಲ್ಲಿ ಬಂದು ಮತ್ತೆ ಮಾಡುವುದನ್ನೇ ಮಾಡುವುದು ಕಾರಣ ಕೇಳಿದರೆ "ನಾವು ಭಾರತೀಯರು, ಇಲ್ಲಿ ಎಲ್ಲ ಹೀಗೆ" ಎಂದು ಸಬೂಬು ನೀಡುತ್ತಾರೆ. ಅಲ್ಲಿಗೆ ಹೋಗಿ ಅವರು ಕಲಿತದ್ದು ಏನು ಎಂದರೆ ನಮ್ಮ ದೇಶವನ್ನು ಬೈವುದೇ ಹೊರತು ಬದಲಿಸುವುದಲ್ಲ. ಎಲ್ಲರಿಗು ಇಂಡಿಯಾ ಫಾರಿನ್ ಆಗ್ಬೇಕು ಆದ್ರೆ ಮಾಡೋರು ಯಾರು? ಸಮಸ್ಯೆ ಎಲ್ಲರದು ಆದರೆ ಪರಿಹಾರ ಕೆಲವರು ಮಾತ್ರ ಹುಡುಕಬೇಕು. ಯಾರು ಅಂದ್ರೆ ಸೋ ಕಾಲ್ಡ್-'ಬುದ್ಧಿಜೀವಿಗಳು'. ಯಾಕೆ ಬೇರೆಯವರ ತಲೇಲಿ ಇರೋದು ಏನು? ಎಲ್ಲದಕ್ಕೂ ಅಣ್ಣ ಹಜ಼ಾರೆನ ಎಲ್ಲಿಂದ ತರೋದು? ಎಲ್ಲರೂ ಎಲ್ಲರಿಗಾಗಿ ಬದುಕಿದಾಗ ಮಾತ್ರ ಎಲ್ಲವೂ ಸಾಧ್ಯ. ದೇಶಪ್ರೇಮ ಇದೊಂದು ದಿನ ಮಾತ್ರವಲ್ಲದೆ ಸದಾ ಎಲ್ಲರಲ್ಲೂ ಹಸಿರಾಗಿರಲಿ ಎಂದು ಹಾರೈಸುತ್ತೇನೆ. ಈ ರೀತಿಯ ನಿನ್ನ ಚಿಂತನೆಗಳಿಗೆ ನನ್ನ ಬೆಂಬಲ ಸದಾ ಇರುತ್ತದೆ. ನಿನಗೂ ೬೫ನೇ ಸ್ವಾತಂತ್ರೋತ್ಸವದ ಹಾರ್ದಿಕ ಶುಭಾಶಯಗಳು.

    ನಿನ್ನ ಗೆಳೆಯ,
    ಸೂರ್ಯ

    ReplyDelete
  2. super agi iddu vicharadhare.. Kushi atapa odi

    ReplyDelete